ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಪ್ರತಿಯಲ್ಲಿ ಸಮಾಜವಾದಿ, ಜಾತ್ಯತೀತ ಪದ ಕಣ್ಮರೆ ವಿವಾದ: ಸಚಿವರ ಸ್ಪಷ್ಟನೆ

ಸಂವಿಧಾನದ ಮೇಲಿನ ದಾಳಿ– ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಟೀಕೆ
Published 20 ಸೆಪ್ಟೆಂಬರ್ 2023, 13:57 IST
Last Updated 20 ಸೆಪ್ಟೆಂಬರ್ 2023, 13:57 IST
ಅಕ್ಷರ ಗಾತ್ರ

ನವದೆಹಲಿ: ವಿಶೇಷ ಅಧಿವೇಶನ ವೇಳೆ ಸಂಸದರಿಗೆ ಮಂಗಳವಾರ ವಿತರಿಸಲಾದ ಸಂವಿಧಾನದ ಇಂಗ್ಲಿಷ್ ಪ್ರತಿಗಳಲ್ಲಿ ‘ಸಮಾಜವಾದಿ ಮತ್ತು ಜಾತ್ಯತೀತ’ ಎಂಬ ಪದಗಳು ಕಣ್ಮರೆಯಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಇದನ್ನು ಸಂವಿಧಾನದ ಮೇಲಿನ ದಾಳಿ ಎಂದು ಆರೋಪಿಸಿವೆ. 

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಅರ್ಜುನ್ ಮೇಘವಾಲ್, ‘ಪ್ರತಿಗಳು ಸಂವಿಧಾನದ ಪೀಠಿಕೆಯ ಮೂಲ ಆವೃತ್ತಿ ಒಳಗೊಂಡಿವೆ. ಸಂವಿಧಾನ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ‘ಸಮಾಜವಾದಿ ಮತ್ತು ಜಾತ್ಯತೀತ’ ಎಂಬ ಪದಗಳಿರಲಿಲ್ಲ. ಈ ಪದಗಳನ್ನು 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿಯಲ್ಲಿ ಸೇರಿಸಲಾಯಿತು’ ಎಂದು ಹೇಳಿದ್ದಾರೆ. 

‘ನಮಗೆ ವಿತರಿಸಲಾದ ಸಂವಿಧಾನ ಪ್ರತಿಗಳಲ್ಲಿ ಸಮಾಜವಾದಿ, ಜಾತ್ಯತೀತ ಪದಗಳು ಕಣ್ಮರೆಯಾಗಿವೆ. ಈ ಪದಗಳನ್ನು 1976 ರಲ್ಲಿ  ತಿದ್ದುಪಡಿಯ ಬಳಿಕ ಸೇರಿಸಲಾಯಿತು ಎಂಬುದು ತಿಳಿದಿದೆ. ಈಗ ಆ ಪದಗಳು ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ. ಕೇಂದ್ರ ಸರ್ಕಾರದ ಉದ್ದೇಶ ಅನುಮಾನಾಸ್ಪದವಾಗಿದೆ ಮತ್ತು ಜಾಣತನದಿಂದ ಪದಗಳನ್ನು ತೆಗೆದು ಹಾಕಲಾಗಿದೆ. ಇದು ಗಂಭೀರ ವಿಷಯವಾಗಿರುವ ಕಾರಣ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಸಿಪಿಎಂ ನ ಬಿನೊಯ್‌ ವಿಶ್ವಂ ಅವರು ಈ ಪದಗಳನ್ನು ತೆಗೆದುಹಾಕಿರುವುದು ಅಪರಾಧ ಎಂದು ಬಣ್ಣಿಸಿದ್ದಾರೆ. 

ಸಂವಿಧಾನದ ಪೀಠಿಕೆ ಮೂಲತಃ ಭಾರತವನ್ನು ‘ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ’ ಎಂದು ಬಣ್ಣಿಸಿದೆ.

ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹೇರಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ  42ನೇ ತಿದ್ದುಪಡಿ ಮೂಲಕ ಹಲವಾರು ಬದಲಾವಣೆಗಳನ್ನು ತರಲಾಯಿತು. ಇದರಲ್ಲಿ ‘ಸಾರ್ವಭೌಮ’ ಮತ್ತು ‘ಪ್ರಜಾಪ್ರಭುತ್ವ’ ನಡುವೆ ‘ಸಮಾಜವಾದಿ’ ಮತ್ತು ‘ಜಾತ್ಯತೀತ’  ಪದಗಳನ್ನು ಸೇರಿಸುವುದು ಹಾಗೂ ‘ರಾಷ್ಟ್ರದ ಏಕತೆ’ಯನ್ನು ‘ರಾಷ್ಟ್ರದ ಏಕತೆ ಮತ್ತು ಸಮಗ್ರತೆ’ ಎಂದು ಬದಲಾಯಿಸುವುದು ಸೇರಿದೆ.

 1994 ರಲ್ಲಿ, ಸುಪ್ರೀಂ ಕೋರ್ಟ್ ‘ಜಾತ್ಯತೀತತೆ’ ಮೂಲಭೂತ ರಚನೆಯ ಸಿದ್ಧಾಂತದ ಭಾಗವಾಗಿದೆ. ಅಂದರೆ ಕೆಲವು ಮೂಲಭೂತ ಗುಣಲಕ್ಷಣಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT