ನವದೆಹಲಿ: ‘ಸಾಮಾನ್ಯ ಜನರ ಬದುಕಿನ ಮೇಲೆ ಪರಿಣಾಮ ಬೀರದಂತಹ ಸಾಂವಿಧಾನಿಕ ವಿಷಯಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುವುದಿಲ್ಲ. ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಬರುವ ಅರ್ಜಿಗಳು ಕೂಡ ಮಹತ್ವದ್ದಾಗಿರುತ್ತವೆ’ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
‘ಇತ್ತೀಚಿನ ದಿನಗಳಲ್ಲಿ ಸಂವಿಧಾನ ಪೀಠದ ಮುಂದಿರುವ ಅರ್ಜಿಗಳ ವಿಚಾರಣೆಯಲ್ಲಿಯೇ ಸುಪ್ರೀಂಕೋರ್ಟ್ ಸಮಯ ವ್ಯರ್ಥ ಮಾಡುತ್ತಿದ್ದು, ಸಾಮಾನ್ಯ ಜನರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ’ ಎಂದು ದೂರಿ, ರಜಿಸ್ಟ್ರಿಗೆ ಇ–ಮೇಲ್ ಮಾಡಿದ್ದ ವಕೀಲರನ್ನು ಉದ್ದೇಶಿಸಿ ಸುಪ್ರೀಂಕೋರ್ಟ್ ಈ ಖಡಕ್ ಮಾತುಗಳನ್ನು ಹೇಳಿದೆ.
‘ಸಂವಿಧಾನ ಪೀಠದ ಬರುವ ಪ್ರಕರಣಗಳು ಎಂಥವು ಎಂಬುದು ನಿಮಗೆ ಗೊತ್ತಿಲ್ಲ ಅನಿಸುತ್ತೆ’ ಎಂದು ದೂರು ಸಲ್ಲಿಸಿದ್ದ ವಕೀಲ ಮ್ಯಾಥ್ಯೂಸ್ ಜೆ.ನೆಡುಂಬಾರ ಅವರನ್ನು ಉದ್ದೇಶಿಸಿ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ನೆಡುಂಬಾರ, ‘ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವಂತಹ ಪ್ರಕರಣಗಳು ಕೂಡ ಮುಖ್ಯ’ ಎಂದರು.
‘ಸಂವಿಧಾನ ಪೀಠದ ಮುಂದೆ ಬರುವ ವಿಷಯಗಳ ಬಗ್ಗೆ ನಿಮಗೆ ಅರಿವಿಲ್ಲ ಅನಿಸುತ್ತದೆ. ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಅರ್ಜಿ ಅಪ್ರಸ್ತುತ ಎಂದು ನೀವು ಯೋಚಿಸಬಹುದು. ಆದರೆ, ಸರ್ಕಾರ ಅಥವಾ ಅರ್ಜಿದಾರರು ಈ ರೀತಿ ವಿಚಾರ ಮಾಡಲಿಕ್ಕಿಲ್ಲ’ ಎಂದು ಸಿಜೆಐ ಹೇಳಿದರು.
‘ದೇಶದ ಲಕ್ಷಾಂತರ ಜನ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದಾದಂತಹ ಪ್ರಕರಣದ ವಿಚಾರಣೆಯನ್ನು ಮೊನ್ನೆ ನಡೆಸಲಾಗಿತ್ತು. ಆ ದಿನ ನೀವು ಕೋರ್ಟ್ ಸಭಾಂಗಣದಲ್ಲಿ ಇದ್ದಿದ್ದರೆ ನಿಮಗೆ ಅರ್ಥವಾಗುತ್ತಿತ್ತು’ ಎಂದೂ ಹೇಳಿದರು.
‘ಲಘು ಮೋಟಾರ ವಾಹನ ಚಾಲನಾ ಪರವಾನಗಿ ಹೊಂದಿರುವ ಚಾಲಕ ಭಾರಿ ವಾಹನ ಚಾಲನೆ ಮಾಡಬಹುದೇ ಎಂಬುದಕ್ಕೆ ಸಂಬಂಧಿಸಿದ ಅರ್ಜಿ ಅದಾಗಿತ್ತು’ ಎಂದೂ ನ್ಯಾಯಪೀಠ ಹೇಳಿತು.
‘ಜನರ ಮೂಲಭೂತ ಹಕ್ಕುಗಳನ್ನು ಒಳಗೊಂಡಂತಹ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಬಗ್ಗೆ ನನ್ನ ವಿರೋಧವಿಲ್ಲ. ಸಾರ್ವಜನಿಕ ಮಹತ್ವದ ವಿಷಯಗಳನ್ನೂ ಕೋರ್ಟ್ ಕೈಗೆತ್ತಿಕೊಳ್ಳಬೇಕು ಎಂಬುದಷ್ಟೆ ನನ್ನ ಒತ್ತಾಯ’ ಎಂದು ನೆಡುಂಬಾರ ಹೇಳಿದರು.
‘ಈ ವಿಷಯದಲ್ಲಿಯೂ ನಿಮ್ಮದು ತಪ್ಪು ತಿಳಿವಳಿಕೆ. ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ, ಜಮ್ಮು–ಕಾಶ್ಮೀರದಿಂದ ಬಂದಿದ್ದ ಗುಂಪೊಂದರ ಅಹವಾಲನ್ನು ನಾವು ಆಲಿಸಿದ್ದೇವೆ. ದೇಶದ ಜನರ ಅಹವಾಲನ್ನು ನಾವು ಆಲಿಸುತ್ತಲೇ ಇದ್ದೇವೆ’ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿತು.
ವರ್ಚುವಲ್ ವಿಚಾರಣೆ ಸ್ಥಗಿತ: ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್
ನವದೆಹಲಿ: ‘ವರ್ಚುವಲ್ ವಿಧಾನದ ಮೂಲಕ ಅರ್ಜಿಗಳ ವಿಚಾರಣೆಯನ್ನು ಸ್ಥಗಿತಗೊಳಿಸಲಾಗಿ ದೆಯೇ’ ಎಂದು ಹೈಕೋರ್ಟ್ ಮತ್ತು ನ್ಯಾಯ ಮಂಡಳಿಗಳನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಈ ಕುರಿತು ಮಾಹಿತಿ ಸಲ್ಲಿಸುವಂತೆ ಶುಕ್ರವಾರ ಸೂಚಿಸಿದೆ.
ಇಂತಹ ನಿರ್ಧಾರದ ಹಿಂದಿರುವ ಕಾರಣಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಎರಡು ವಾರಗಳ ಒಳಗಾಗಿ ಸಲ್ಲಿಸುವಂತೆ ಎಲ್ಲ ರಿಜಿಸ್ಟ್ರಾರ್ ಜನರಲ್‌ಗಳಿಗೆ ನಿರ್ದೇಶನ ನೀಡಿದೆ.
ಸರ್ವೇಶ್ ಮಾಥೂರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಮುಖ್ಯನ್ಯಾಯ
ಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
‘ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆಗೆ ಅನುಮತಿ ನೀಡುತ್ತಿಲ್ಲ. ವಿಡಿಯೊ ಕಾನ್ಫರೆನ್ಸ್ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಕೋವಿಡ್–19 ಪಿಡುಗಿನ ವೇಳೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ’ ಎಂದು ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದ ಮಾಥೂರ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.
‘ಈ ಮಾಹಿತಿಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಹೇಳಿದ ನ್ಯಾಯಪೀಠ, ‘ಇಂಥ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಹು ದಿನಗಳಿಂದ ಯೋಚಿಸುತ್ತಿದ್ದ ನಮಗೆ, ಇದನ್ನು ಕಾರ್ಯಗತಗೊಳಿಸಲು ವೇದಿಕೆ ಒದಗಿಸಿಕೊಟ್ಟಿದ್ದೀರಿ’ ಎಂದು ನ್ಯಾಯಪೀಠವು ಅರ್ಜಿದಾರ ಮಾಥೂರ್ ಅವರಿಗೆ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.