ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗ್ನತೆ ಮತ್ತು ಅಶ್ಲೀಲತೆ ಸಮಾನಾರ್ಥಕವಲ್ಲ: ಕೇರಳ ಹೈಕೋರ್ಟ್

ರೆಹನಾ ಫಾತೀಮಾ ವಿರುದ್ಧದ ಪ್ರಕರಣ ರದ್ದು
Published 6 ಜೂನ್ 2023, 16:06 IST
Last Updated 6 ಜೂನ್ 2023, 16:06 IST
ಅಕ್ಷರ ಗಾತ್ರ

ಕೊಚ್ಚಿ : ‘ತಮ್ಮ ದೇಹ ಮತ್ತು ಜೀವನಕ್ಕೆ ಸಂಬಂಧಿಸಿದಂತೆ ಸ್ವಂತ ನಿರ್ಧಾರ ಕೈಗೊಳ್ಳುವ ಮಹಿಳೆಯರು ಹೆಚ್ಚು ತಾರತಮ್ಯ ಮತ್ತು ದಬ್ಬಾಳಿಕೆಗೆ ಒಳಗಾಗುತ್ತಾರೆ’ ಎಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗೆ (ಪೋಕ್ಸೊ) ಸಂಬಂಧಿಸಿದ ಪ್ರಕರಣದಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ರೆಹಾನಾ ಫಾತೀಮಾ ಅವರನ್ನು ಖುಲಾಸೆ ಮಾಡಿದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರು ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ತಾಯಿಯು ತನ್ನ ದೇಹದ ಮೇಲ್ಭಾಗದಲ್ಲಿ ಸ್ವಂತ ಮಕ್ಕಳಿಂದ ಚಿತ್ರ ಬಿಡಿಸಿಕೊಂಡಿದ್ದರೆ ಅದರಲ್ಲಿ ಲೈಂಗಿಕ ಉದ್ದೇಶವಿದೆ ಎಂದು ಹೇಳಲಾಗದು.  ತನ್ನ ದೇಹದ ಬಗ್ಗೆ ಸ್ವತಂತ್ರವಾದ ನಿರ್ಧಾರ ಕೈಗೊಳ್ಳಲು ಮಹಿಳೆಗೆ ಸಂವಿಧಾನದ ವಿಧಿ 21ರ ಅಡಿ ಹಕ್ಕು ನೀಡಲಾಗಿದೆ. ಅಂತೆಯೇ ನಗ್ನತೆ ಮತ್ತು ಅಶ್ಲೀಲತೆಯು ಯಾವಾಗಲೂ ಸಮಾನಾರ್ಥಕವಲ್ಲ. ನಗ್ನತೆಯನ್ನು ಮೂಲಭೂತವಾಗಿ ಅಶ್ಲೀಲ, ಅಸಭ್ಯ ಅಥವಾ ಅನೈತಿಕ ಎಂದು ವರ್ಗೀಕರಿಸುವುದು ತಪ್ಪು’ ಎಂದೂ ಹೇಳಿದ್ದಾರೆ. 

ರೆಹನಾ ಅವರು ತಮ್ಮ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಂದ ತಮ್ಮ ದೇಹದ ಮೇಲೆ ವರ್ಣಚಿತ್ರ ಬರೆಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪೋಕ್ಸೊ, ಬಾಲಾಪರಾಧ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

‘ಮಹಿಳೆಯ ದೇಹವನ್ನು ಸಮಾಜವು ಹೇಗೆ ನೋಡುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಂದ ದೇಹದ ಮೇಲೆ ಚಿತ್ರ ಬರೆಸಿಕೊಂಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಹಾಗಾಗಿ, ಈ ಪ್ರಕರಣವನ್ನು ಕೈಬಿಡಬೇಕು’ಎಂದು ಕೋರಿ ರೆಹನಾ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಯನ್ನು ತಿರಸ್ಕರಿಸಲಾಗಿತ್ತು. ಬಳಿಕ ರೆಹನಾ ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT