ರುದ್ರಪುರ(ಉತ್ತರಾಖಂಡ): ಖಾಸಗಿ ಆಸ್ಪತ್ರೆಯೊಂದರ ನರ್ಸ್ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಯು ನರ್ಸ್ ಶವವನ್ನು ಉತ್ತರಾಖಂಡ ಗಡಿ ಸಮೀಪ ಇರುವ, ಉತ್ತರ ಪ್ರದೇಶದ ಗ್ರಾಮವೊಂದರ ಖಾಲಿ ನಿವೇಶನದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
‘ಘಟನೆಗೆ ಸಂಬಂಧಿಸಿ, ಆರೋಪಿ ಧರ್ಮೇಂದ್ರ ಎಂಬಾತನನ್ಬು ಬಂಧಿಸಲಾಗಿದೆ’ ಎಂದು ಉತ್ತರಾಖಂಡದ ಉಧಂಪುರ ಸಿಂಗ್ ನಗರ ಜಿಲ್ಲೆಯ ಎಸ್ಪಿ ಟಿ.ಸಿ.ಮಂಜುನಾಥ ಹೇಳಿದ್ದಾರೆ.
ಉತ್ತರ ಪ್ರದೇಶದ ಬರೇಲಿಯ ಧರ್ಮೇಂದ್ರ, ಉತ್ತರಾಖಂಡದ ಗದರ್‌ಪುರದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ರಾಜಸ್ಥಾನದಲ್ಲಿ ಆಗಸ್ಟ್ 13ರಂದು ಬಂಧಿಸಲಾಗಿದೆ ಎಂದು ಮಂಜುನಾಥ ತಿಳಿಸಿದ್ದಾರೆ.
ಕೆಲಸ ಮುಗಿಸಿ, ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ವೇಳೆ, ಜುಲೈ 30ರಿಂದ ನರ್ಸ್ ನಾಪತ್ತೆಯಾಗಿದ್ದರು. ಅವರ ಮೃತದೇಹ ಆಗಸ್ಟ್ 8ರಂದು ಉತ್ತರಾಖಂಡ ಗಡಿ ಸಮೀಪದ ದಿಬ್‌ದಿಬಾ ಗ್ರಾಮದಲ್ಲಿ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.
ಆರೋಪಿಯು ಕಲ್ಲಿನಿಂದ ಜಜ್ಜಿರುವ ಕಾರಣ, ನರ್ಸ್ ಮುಖ ಗುರುತು ಸಿಗಲಾರದಷ್ಟು ವಿರೂಪಗೊಂಡಿತ್ತು. ಅಪರಾಧ ಎಸಗಿದ ನಂತರ, ಆರೋಪಿಯು ಆಕೆಯಲ್ಲಿದ್ದ ಹಣ, ಮೊಬೈಲ್ ಹಾಗೂ ಮೌಲ್ಯಯುತ ವಸ್ತುಗಳೊಂದಿಗೆ ಪರಾರಿಯಾಗಿದ್ದ ಎಂದು ಎಸ್ಪಿ ತಿಳಿಸಿದ್ದಾರೆ.
ಮೃತ ನರ್ಸ್ ಮನೆ ಉತ್ತರಪ್ರದೇಶದ ರಾಂಪುರ ಜಿಲ್ಲೆಯ ಗಡಿಯಲ್ಲಿದೆ. ಮನೆ ಸಮೀಪದ ನಿವೇಶನವೊಂದರಲ್ಲಿ ನರ್ಸ್ ಶವ ಪತ್ತೆಯಾಗಿದೆ. ಈ ಜಾಗ ಉತ್ತರಾಖಂಡದ ಉಧಮ್‌ಸಿಂಗ್ ನಗರ ಜಿಲ್ಲೆಗೆ ಸೇರಿದೆ. ನರ್ಸ್ ಕಾಣೆಯಾದ ಕುರಿತು ಆಕೆಯ ಸಹೋದರಿ ಜುಲೈ 31ರಂದು ದೂರು ನೀಡಿದ್ದರು.
‘ಸಿ.ಸಿ.ಟಿವಿ ದೃಶ್ಯಗಳ ನೆರವು ಹಾಗೂ ಮೃತಳ ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಎಸ್ಪಿ ಮಂಜುನಾಥ ತಿಳಿಸಿದ್ದಾರೆ.
ಆರೋಪಿ ಹೇಳಿದ್ಧೇನು: ‘ನನಗೆ ಹಣದ ಅವಶ್ಯಕತೆ ಇತ್ತು. ನರ್ಸ್ ಬಳಿಯ ಹಣ ದೋಚುವ ಸಲುವಾಗಿ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಆಕೆಯನ್ನು ಹಿಂಬಾಲಿಸಿದೆ. ನಿರ್ಜನ ಪ್ರದೇಶದಲ್ಲಿದ್ದಾಗ, ಬಲವಂತದಿಂದ ಆಕೆಯನ್ನು ಗಿಡಕಂಟಿಗಳ ಕಡೆಗೆ ಎಳೆದೊಯ್ದೆ ಎಂಬುದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ’ ಎಂದು ಎಸ್ಪಿ ಮಂಜುನಾಥ ಹೇಳಿದ್ದಾರೆ.
‘ಆಕೆ ಕಿರುಚಲು ಯತ್ನಿಸಿದಳು. ಸ್ಕಾರ್ಫ್‌ನಿಂದ ಉಸಿರುಗಟ್ಟಿಸಲು ಮುಂದಾದಾಗ ಆಕೆ ಪ್ರಜ್ಞಾಹೀನಳಾದಳು. ಆಕೆ ಮೇಲೆ ಅತ್ಯಾಚಾರ ಎಸಗಿ, ನಂತರ ಮುಖಕ್ಕೆ ಕಲ್ಲಿನಿಂದ ಜಜ್ಜಿದೆ ಎಂದೂ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.