ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್‌

ಮಧ್ಯಪ್ರದೇಶ ಹೈಕೋರ್ಟ್‌ ತೀರ್ಪು ಎತ್ತಿಹಿಡಿದ ಕೋರ್ಟ್‌
Published 30 ಮೇ 2023, 16:15 IST
Last Updated 30 ಮೇ 2023, 16:15 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

ಈ ಸಂಬಂಧ ಕೃಷ್ಣ ಕುಮಾರ್ ರಘುವಂಶಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ರಜಾಕಾಲದ ಪೀಠವು, ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಇಷ್ಟಪಡುವುದಿಲ್ಲ ಎಂದು ಹೇಳಿ, ಮನವಿಯನ್ನು ತಿರಸ್ಕರಿಸಿತು. 

‘ಸಾಮಾಜಿಕ ಮಾಧ್ಯಮಗಳ ಮೂಲಕ ಯಾರೊಬ್ಬರೂ ನ್ಯಾಯಾಧೀಶರನ್ನು ದೂಷಣೆ ಮಾಡುವಂತಿಲ್ಲ ಅಥವಾ ಅಪವಾದ ಹೊರಿಸುವಂತಿಲ್ಲ’ ಎಂದೂ ಪೀಠ ಹೇಳಿದೆ.  

‘ನಿಮ್ಮ ಪರ ತೀರ್ಪು ಬಾರದಿದ್ದಾಗ ನೀವು ನ್ಯಾಯಾಧೀಶರನ್ನು ದೂಷಿಸಬಹುದು ಎಂದರ್ಥವಲ್ಲ. ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಕೇವಲ ಕಾರ್ಯಾಂಗದಿಂದ ಸ್ವತಂತ್ರವಾಗಿರುವುದಲ್ಲ. ಹೊರಗಿನ ಶಕ್ತಿಗಳಿಂದಲೂ ಸ್ವತಂತ್ರವಾಗಿರುವುದಾಗಿದೆ. ಇದು ಇತರರಿಗೆ ಪಾಠವಾಗಬೇಕು’ ಎಂದು ಪೀಠ ಎಚ್ಚರಿಸಿದೆ. 

‘ಅರ್ಜಿದಾರರು ನ್ಯಾಯಾಧೀಶರನ್ನು ದೂಷಿಸಿದ್ದಾರೆ. ನ್ಯಾಯಾಧೀಶರ ಮೇಲೆ ಆರೋಪ ಹೊರಿಸುವ ಮೊದಲು ಅವರು ಎರಡು ಬಾರಿ ಯೋಚಿಸಬೇಕಿತ್ತು. ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಆದ ಹಾನಿ ಬಗ್ಗೆಯೂ ಅವರು ಯೋಚಿಸಬೇಕಿತ್ತು’ ಎಂದು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಮೌಖಿಕವಾಗಿ ಹೇಳಿದರು.

ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು ಮೇ 27ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಶಿಕ್ಷೆ ಅವಧಿ ವಿಪರೀತವಾಯಿತು’ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ನಾವು ಇಲ್ಲಿರುವುದು ಸರಿ ತಪ್ಪುಗಳನ್ನು ನಿರ್ಧರಿಸುವುದಕ್ಕೇ ಹೊರತು ಇಂತಹ ವ್ಯಕ್ತಿಗಳಿಗೆ ಕರುಣೆ ತೋರುವುದಕ್ಕಲ್ಲ’ ಎಂದು ಪೀಠ ಖಾರವಾಗಿ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT