ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತನ್ನ ಪ್ರಸ್ತುತ ಅಧಿಕಾರಾವಧಿಯಲ್ಲೇ 'ಒಂದು ರಾಷ್ಟ್ರ, ಒಂದು ಚುನಾವಣೆ'ಯನ್ನು ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳಿಂದ ಬೆಂಬಲ ಸಿಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಗೆ 100 ದಿನಗಳು ಪೂರ್ಣಗೊಂಡಿದ್ದು, ಆಡಳಿತಾರೂಢ ಮೈತ್ರಿಕೂಟದ ಒಗ್ಗಟ್ಟು ಉಳಿದ ಅವಧಿಗೂ ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿವೆ.
‘ಇದೇ ಅವಧಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಜಾರಿಗೆ ಬರಲಿದೆ. ಇದುವೇ ಸತ್ಯ’ಎಂದು ಒಂದು ಮೂಲ ತಿಳಿಸಿದೆ.
ಕಳೆದ ತಿಂಗಳು ಸ್ವಾತಂತ್ರ್ಯ ದಿನೋತ್ಸವದ ಭಾಷಣದಲ್ಲಿಯೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಮೋದಿ, ಆಗಾಗ್ಗೆ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಮಾರಕ ಎಂದು ಹೇಳಿದ್ದರು. ದೇಶವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮೂಲಕ ಮುಂದುವರಿಯಬೇಕು ಎಂದಿದ್ದರು.
ರಾಷ್ಟ್ರೀಯ ಸಂಪನ್ಮೂಲಗಳನ್ನು ಸಾಮಾನ್ಯ ಜನರ ಏಳಿಗೆಗೆ ಬಳಸುವುದನ್ನು ಪಕ್ಷಗಳು ಖಚಿತಪಡಿಸಬೇಕಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ಕನಸನ್ನು ನಾವು ಅರಿತುಕೊಳ್ಳಬೇಕಿದೆ ಎಂದಿದ್ದರು.
ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಆಶ್ವಾಸನೆಗಳಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಪ್ರಮುಖವಾಗಿತ್ತು.
ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮಾರ್ಚ್ ತಿಂಗಳಲ್ಲಿ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿತ್ತು.