ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಗುರುವಾರ ಖಂಡಿಸಿವೆ.
‘ಪ್ರಧಾನಿ ಮೋದಿ ವಿಭಜಕ ಕಾರ್ಯಸೂಚಿ’ ಹರಡುತ್ತಿದ್ದಾರೆ. ಅದರಲ್ಲೂ, ಕೋಮುವಾದಿ ನಾಗರಿಕ ಸಂಹಿತೆ’ ಎಂಬ ಹೇಳಿಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಮೋದಿ ಅವರಲ್ಲಿರುವ ದ್ವೇಷಭಾವನೆ, ವಂಚಕ ಬುದ್ಧಿ ಹಾಗೂ ಇತಿಹಾಸಕ್ಕೆ ಕಳಂಕ ಹಚ್ಚುವ ಯತ್ನಗಳು ಕೆಂಪು ಕೋಟೆ ಮೇಲಿಂದ ಮಾಡಿದ ಅವರ ಭಾಷಣದಲ್ಲಿ ಢಾಳಾಗಿ ಪ್ರದರ್ಶನಗೊಂಡಿವೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಕೋಮುವಾದಿ ನಾಗರಿಕ ಸಂಹಿತೆ’ ಜಾರಿಯಲ್ಲಿದೆ ಎಂದು ಹೇಳುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಭಾರಿ ಅವಮಾನ. ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು. ಅವರ ಆಶಯ 1950ರಲ್ಲಿ ಈಡೇರಿತ್ತು. ಆದರೆ, ಈ ಸುಧಾರಣೆಗಳಿಗೆ ಆರ್‌ಎಸ್‌ಎಸ್ ಹಾಗೂ ಜನಸಂಘ ಭಾರಿ ವಿರೋಧ ವ್ಯಕ್ತಪಡಿಸಿದ್ದವು–ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣ ದೇಶದ ಜನರಲ್ಲಿ ಒಗ್ಗಟ್ಟು ಮತ್ತು ಪ್ರೇರಣೆ ಮೂಡಿಸುವಂತಹ ಯಾವುದೇ ವಿಚಾರವನ್ನು ಒಳಗೊಂಡಿರಲಿಲ್ಲ. ಅವರು ಮಾತನಾಡಿದ್ದೆಲ್ಲ ಆರ್‌ಎಸ್‌ಎಸ್‌ನ ವಿಭಜಕ ಕಾರ್ಯಸೂಚಿಯಂತೆ ಇತ್ತು– ಡಿ.ರಾಜಾ, ಸಿಪಿಐ ಪ್ರಧಾನ ಕಾರ್ಯದರ್ಶಿ
ಪ್ರಧಾನಿ ಮೋದಿ ಹೇಳುತ್ತಿರುವ ‘ಒಂದು ದೇಶ–ಒಂದು ಚುನಾವಣೆ’ ಪರಿಕಲ್ಪನೆ ಹಿಂದಿರುವ ಉದ್ದೇಶ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆದರೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವುದೇ ಮೊದಲ ಆದ್ಯತೆಯಾಗಬೇಕು. ಚುನಾವಣೆಗಳಿಗಾಗಿ ಸಂಪನ್ಮೂಲ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ ಆದರೆ, 2047ರ ವೇಳೆಗೆ ಭಾರತವನ್ನು ದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಬಗ್ಗೆ ಮಾತನಾಡುತ್ತೇವೆ!–ಆ್ಯನಿ ರಾಜಾ, ಸಿಪಿಐ ನಾಯಕಿ ಹಾಗೂ ಎನ್‌ಎಫ್‌ಐಡಬ್ಲ್ಯು ಪ್ರಧಾನ ಕಾರ್ಯದರ್ಶಿ
ದೇಶಕ್ಕೆ ಒಬ್ಬರೇ ಒಬ್ಬ ಪ್ರಧಾನಿ ಇದ್ದಾರೆ. ವಿರೋಧ ಪಕ್ಷಗಳಿಗೆ ಮತ ಹಾಕಿದವರಿಗೆ ಪ್ರತ್ಯೇಕ ಪ್ರಧಾನಿ ಇಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥ ಮಾಡಿಕೊಳ್ಳಬೇಕು. ಅವರ ಹೃದಯವೈಶಾಲ್ಯ ಪ್ರದರ್ಶಿಸುತ್ತಾರೆ ಎಂಬ ದೊಡ್ಡ ನಿರೀಕ್ಷೆ ಹೊಂದಿರುತ್ತೇವೆ. ಆದರೆ, ಪ್ರತಿಬಾರಿ ನಮಗೆ ನಿರಾಶೆ ಆಗುತ್ತದೆ–ಮನೋಜ್ ಝಾ, ಆರ್‌ಜೆಡಿ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.