ನವದೆಹಲಿ: ಪ್ರತಿಪಕ್ಷಗಳು ಕೆಟ್ಟ ರಾಜಕಾರಣ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ದೇಶದಾದ್ಯಂತ ಇರುವ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರತಿಪಕ್ಷಗಳು ಕೆಲಸ ಮಾಡುವುದಿಲ್ಲ ಮತ್ತು ಇತರರನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂಬ ತತ್ವದಡಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಹೊಸ ಸಂಸತ್ ಭವನದ ನಿರ್ಮಾಣವನ್ನು ಪ್ರತಿಪಕ್ಷಗಳು ವಿರೋಧಿಸುತ್ತಿವೆ. ವಿರೋಧ ಪಕ್ಷಗಳು 70 ವರ್ಷಗಳಿಂದ ಹುತಾತ್ಮರಿಗೆ ಒಂದು ಯುದ್ಧ ಸ್ಮಾರಕವನ್ನು ನಿರ್ಮಿಸಿಲ್ಲ, ನಾವು ಈಗ ಅದನ್ನು ನಿರ್ಮಿಸಿದರೆ ನಾಚಿಕೆ ಇಲ್ಲದೆ ಅದನ್ನು ವಿರೋಧಿಸುತ್ತಿವೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತೆಯ ಪ್ರತಿಮೆ’ ವಿಶ್ವದ ಅತಿದೊಡ್ಡ ಪ್ರತಿಮೆಯಾಗಿದೆ ಮತ್ತು ಎಲ್ಲಾ ಭಾರತೀಯರು ಅದರ ಬಗ್ಗೆ ಹೆಮ್ಮೆ ಪಡುತ್ತಾರೆ. ಕೆಲವು ಪಕ್ಷಗಳು ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಚುನಾವಣಾ ಸಮಯದಲ್ಲಿ ನೆನಪಿಸಿಕೊಳ್ಳುತ್ತಾರೆ. ಆದರೆ, ಅವರ ಪ್ರತಿಮೆಗೆ ಗೌರವ ಸಲ್ಲಿಸಲು ಯಾವ ದೊಡ್ಡ ನಾಯಕರು ಹೋಗುವುದಿಲ್ಲ ಎಂದು ಮೋದಿ ತಿಳಿಸಿದರು.
ಪ್ರತಿಪಕ್ಷಗಳು ನಕಾರಾತ್ಮಕ ರಾಜಕಾರಣ ಮಾಡುತ್ತಿವೆ. ಆ ಕೆಟ್ಟ ರಾಜಕೀಯದಿಂದ ಮೇಲೆದ್ದು, ನಾವು ಸಕಾರಾತ್ಮಕ ರಾಜಕೀಯ ಹಾದಿಯಲ್ಲಿ ಸಾಗುತ್ತಿದ್ದೇವೆ, ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದು ಮೋದಿ ಹೇಳಿದರು.
ಇಂದು ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ ಎಂದು ಮೋದಿ ಪ್ರತಿಪಾದಿಸಿದರು.
‘ಅಭಿವೃದ್ಧಿ ಗುರಿಯತ್ತ ಸಾಗುತ್ತಿರುವ ಭಾರತದ ಅಮೃತ ಕಾಲ ಆರಂಭವಾಗಿದೆ. ಹೊಸ ಶಕ್ತಿ, ಹೊಸ ಸ್ಪೂರ್ತಿ ಮತ್ತು ಹೊಸ ಸಂಕಲ್ಪಗಳಿವೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ’ ಎಂದು ಮೋದಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.