ನವದೆಹಲಿ: ವಿರೋಧ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಅನೌಪಚಾರಿಕ ಚರ್ಚೆ ನಡೆಸುತ್ತಿವೆ ಮತ್ತು ಕರಡು ಕಾನೂನು ಹೊರಬಂದ ನಂತರ ಸೂಕ್ಷ್ಮವಾಗಿ ಗಮನ ಹರಿಸಲಾಗುವುದು ಎಂದು ರಾಜ್ಯಸಭಾ ಸಂಸದ ಮನೋಜ್ ಝಾ ಸೋಮವಾರ ಹೇಳಿದ್ದಾರೆ.
ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ ಸಾಮಾನ್ಯ ಕಾರ್ಯಸೂಚಿ ಚರ್ಚಿಸಲು ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿಯೇ 23ನೇ ಕಾನೂನು ಆಯೋಗ ರಚಿಸಿರುವ ಕರಡು ರೂಪುರೇಷೆಯು ಮಂಡನೆಯಾಗುವ ಸಾಧ್ಯತೆ ಇದೆ.
ಏಕರೂಪ ವೈಯಕ್ತಿಕ ಕಾನೂನು ತರುವ ಸರ್ಕಾರದ ಉದ್ದೇಶ ಪ್ರಶ್ನಿಸಿರುವ ಝಾ, ನಾಗರಿಕರ ಆರ್ಥಿಕ ಕಲ್ಯಾಣ ರಕ್ಷಿಸಲು ಮತ್ತು ಉತ್ತೇಜಿಸಲು ನಿರ್ದೇಶಿಸುವ ಸಂವಿಧಾನದ 39ನೇ ವಿಧಿಯತ್ತ ಸರ್ಕಾರ ಗಮನ ಹರಿಸುತ್ತಿಲ್ಲ. ಆದರೂ ಯುಸಿಸಿ ಅನ್ನು ಸಂವಿಧಾನದ 44 ನೇ ವಿಧಿಯಡಿ ತರಲಾಗುತ್ತಿದೆ ಎಂದು ರಾಷ್ಟ್ರೀಯ ಜನತಾ ದಳ ನಾಯಕ ಝಾ ಹೇಳಿದರು.
ಮತದಾರರನ್ನು ವಿಭಜಿಸುವುದು ಮತ್ತು ಧ್ರುವೀಕರಣಗೊಳಿಸುವುದು ಈ ಕರಡು ಹಿಂದಿನ ಉದ್ದೇಶವಾಗಿದೆ ಎಂದು ಝಾ ಹೇಳಿದರು.
‘ಅನೌಪಚಾರಿಕ ಚರ್ಚೆಗಳು ನಡೆಯುತ್ತಿವೆ. ಯುಸಿಸಿ ಕುರಿತ ಒಂದು ಪ‍್ಯಾರಾ ಓದದವರು ಇದರ ಬಗ್ಗೆ ಮಾತನಾಡುತ್ತಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಹಿಂದಿನ ಕಾನೂನು ಆಯೋಗ ಏನು ಹೇಳಿದೆ ಅಥವಾ 1948 ಸಂವಿಧಾನ ಸಭೆಯಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಹೇಳಿಕೆ ಏನು ಎಂಬುದು ಅವರಿಗೆ ತಿಳಿದಿಲ್ಲ’ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಲಬೀರ್ ಸಿಂಗ್ ಅಧ್ಯಕ್ಷತೆಯಲ್ಲಿ 2015ರಿಂದ 2018ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ 21ನೇ ಕಾನೂನು ಆಯೋಗ, ಯುಸಿಸಿ ಅನಗತ್ಯ ಮತ್ತು ಅಪೇಕ್ಷಣೀಯವಲ್ಲ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.