ಜೈಪುರ: ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ವೇಳೆ ಸುಮಾರು ಹನ್ನೆರಡು ಜನರಿದ್ದ ಗುಂಪೊಂದು ಇಲ್ಲಿನ ಅಮೋಲಿ ಟೋಲ್ ಪ್ಲಾಜಾ ಬಳಿ ರಾಜಸ್ಥಾನ ರಸ್ತೆ ಸಾರಿಗೆ ಬಸ್ಸಿನ ಒಳಗೆ ನುಗ್ಗಿ ಆರೋಪಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಸ್ಸಿನಲ್ಲಿದ್ದ ಮತ್ತೊಬ್ಬ ಕೊಲೆ ಆರೋಪಿ ಗಾಯಗೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
‘ಒಂದು ಕಾರು ಮತ್ತು ಎರಡು ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಟೋಲ್ ಪ್ಲಾಜಾ ಬಳಿ ಬಸ್ಸನ್ನು ತಡೆದರು. ನಂತರ ಬಸ್ಸಿನ ಒಳಗೆ ನುಗ್ಗಿ ಪೊಲೀಸ್ ಸಿಬ್ಬಂದಿ ಕಣ್ಣಿಗೆ ಕಾರದ ಪುಡಿ ಎಸೆದರು. ಬಳಿಕ ಕೊಲೆ ಆರೋಪಿ ಕುಲದೀಪ್ ಜಘೀನಾ ಮತ್ತು ವಿಜಯ್‌ಪಾಲ್ ಅವರತ್ತ ಗುಂಡಿನ ದಾಳಿ ನಡೆಸಿದರು. ತೀವ್ರ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜಘೀನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ವಿಜಯ್‌ಪಾಲ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನಾ ಸ್ಥಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಛ್ಚಾವಾ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.