ಕೋಲ್ಕತ್ತ: ಇಲ್ಲಿನ ಆರ್.ಜಿ. ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿರುವ ಹೊತ್ತಿನಲ್ಲೇ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬಿರ್‌ಭುಮ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ವ್ಯಕ್ತಿ, ಚಿಕಿತ್ಸೆ ನೀಡುತ್ತಿದ್ದ ನರ್ಸ್‌ಗೆ ಗುಪ್ತಾಂಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಶನಿವಾರ ರಾತ್ರಿ ಘಟನೆ ನಡೆದಿದೆ. ಈ ಸಂಬಂಧ ಆಸ್ಪತ್ರೆಯ ಆಡಳಿತ ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
'ರೋಗಿಯು ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡ. ನನ್ನ ಗುಪ್ತಾಂಗದ ಮೇಲೆ ಮುಟ್ಟಿ, ಅನುಚಿತವಾಗಿ ವರ್ತಿಸಿದ. ಅಷ್ಟಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ' ಎಂದು ನರ್ಸ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಸೂಕ್ತ ಭದ್ರತೆ ಇಲ್ಲದಿರುವುದಕ್ಕೆ ಇಂತಹ ಕೃತ್ಯಗಳು ಪದೇಪದೆ ವರದಿಯಾಗುತ್ತಿವೆ. ಇಲ್ಲವಾದರೆ, ವ್ಯಕ್ತಿಯೊಬ್ಬ ಕರ್ತವ್ಯನಿರತರೊಬ್ಬರಿಗೆ ತನ್ನ ಕುಟುಂಬದ ಸಮ್ಮುಖದಲ್ಲೇ ಈ ರೀತಿ ಮಾಡಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.