ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪನೆ ಮಾಡಿರುವ ಅಧಿಸೂಚನೆ ರದ್ದುಗೊಳಿಸಬೇಕೆಂದು ಕೋರಿ ಲಖನೌ ಮೂಲದ ವಕೀಲ ಅಶೋಕ್ ಪಾಂಡೆ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ಸಂವಿಧಾನದ 102ನೇ ವಿಧಿ ಮತ್ತು ಜನ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 8 (3)ರ ಪ್ರಕಾರ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಕಪೂರ್ ವರ್ಸಸ್ ತಮಿಳುನಾಡು ಪ್ರಕರಣದಲ್ಲಿ ನೀಡಿರುವ ತೀರ್ಪುಗಳ ಅನ್ವಯ, ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಮರುಸ್ಥಾಪನೆ ಮಾಡುವುದು ಸರಿಯಲ್ಲ ಮನವಿಯಲ್ಲಿ ತಿಳಿಸಲಾಗಿದೆ.
2019ರಲ್ಲಿ ರಾಹುಲ್ ಅವರು ಮೋದಿ ಉಪನಾಮ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಇದೇ ಮಾರ್ಚ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಹುಲ್ ಅವರನ್ನು ದೋಷಿ ಎಂದು ಪರಿಗಣಿಸಿ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅವರಿಗೆ ಹಿನ್ನಡೆಯಾಗಿತ್ತು.
ಬಳಿಕ ರಾಹುಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ರಾಹುಲ್ ಅವರಿಗೆ ಶಿಕ್ಷೆ ವಿಧಿಸಿ ಸೂರತ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಆಗಸ್ಟ್ 4ರಂದು ತಡೆ ನೀಡಿತ್ತು. ಇದಾದ ಬಳಿಕ ಅವರ ಲೋಕಸಭಾ ಸದಸ್ಯತ್ವವನ್ನು ಮರು ಸ್ಥಾಪನೆ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.