ನವದೆಹಲಿ: ಇಳುವರಿ, ಪೌಷ್ಠಿಕಾಂಶ ಹೆಚ್ಚಿಸುವ ಮತ್ತು ದೇಶದ ವಿವಿಧ ವಾತಾವರಣಗಳಲ್ಲಿ ಬೆಳೆಯಬಲ್ಲ ಜೈವಿಕ ಬಲವರ್ಧಿತ ಒಣ ಬೇಸಾಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ109 ಪ್ರಭೇದಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಈ ಬೀಜಗಳಿಂದ ಬೆಳೆಯುವ ಬೆಳೆ ಉತ್ಪಾದನೆ ಹೆಚ್ಚಿಸುವ ಮೂಲಕ ರೈತರ ಆದಾಯವನ್ನು ವೃದ್ಧಿಸುತ್ತವೆ ಎಂದು ವರದಿ ತಿಳಿಸಿದೆ.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ಐಸಿಎಆರ್) ಅಭಿವೃದ್ಧಿಪಡಿಸಿರುವ ಈ ಪ್ರಭೇದಗಳಲ್ಲಿ 34 ಧಾನ್ಯಗಳು ಮತ್ತು 27 ತೋಟಗಾರಿಕಾ ಬೆಳೆಗಳು ಇವೆ.
ಬೇಳೆ ಕಾಳುಗಳು, ಧಾನ್ಯಗಳು, ಎಣ್ಣೆ ಕಾಳುಗಳು, ಕಬ್ಬು, ಹತ್ತಿ, ಮೇವು, ಹಲವು ವಿಧಧ ಹಣ್ಣುಗಳು, ತರಕಾರಿ, ಹೂ, ಮಸಾಲೆ ಪದಾರ್ಥಗಳು, ಔಷಧಿ ಸಸ್ಯ, ಗೆಡ್ಡೆ ಸಂಬಂಧಿತ ಬೆಳೆಗಳು, ತೋಟಗಾರಿಕಾ ಬೆಳೆಗಳ ಬೀಜಗಳು ಇದರಲ್ಲಿ ಸೇರಿವೆ.
ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 2014ರಿಂದಲೂ ಮೋದಿ ಸುಸ್ಥಿರ ಬೇಸಾಯ ಪದ್ಧತಿ ಮತ್ತು ಹವಾಮಾನ ವೈಪರಿತ್ಯಗಳನ್ನು ತಡೆಯಬಲ್ಲ ವಿಧಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವರು ನಿರಂತರವಾಗಿ ಜೈವಿಕ ಬಲವರ್ಧಿತ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆ ಮೂಲಕ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿಯಲ್ಲಿ ಪೌಷ್ಠಿಕಾಂಶ ಕೊರತೆ ಹೋಗಲಾಡಿಸಲು ಬಳಸುತ್ತಿದ್ದಾರೆ.