ಚಂಡೀಗಢ (ಹರಿಯಾಣ): ನಿರುದ್ಯೋಗ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಉದ್ಯೋಗ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸಿದ್ದಾರೆ ಎಂದು ಆರೋಪಿಸಿದರು.
ಅಸ್ಸಂದ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಬಿಜೆಪಿ ಹರಿಯಾಣವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭ ಹರಿಯಾಣ ಮೂಲದ ವಲಸಿಗರನ್ನು ಭೇಟಿ ಮಾಡಿದ್ದೇನೆ. ತಮ್ಮ ರಾಜ್ಯದಲ್ಲಿ ಉದ್ಯೋಗ ಸಿಗದ ಕಾರಣ ಉತ್ತಮ ಭವಿಷ್ಯಕ್ಕಾಗಿ ಅವರು ಅಲ್ಲಿಗೆ ವಲಸೆ ಹೋಗಿದ್ದರು’ ಎಂದರು.
ಇದೇ ವೇಳೆ ಪಕ್ಷದ ಪ್ರಣಾಳಿಕೆಯನ್ನು ಪ್ರಸ್ತಾಪಿಸಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ ₹2 ಸಾವಿರ ಮತ್ತು ₹500ಕ್ಕೆ ಅಡುಗೆ ಅನಿಲ ನೀಡಲಾಗುವುದು. ರಾಜ್ಯದಲ್ಲಿ ಖಾಲಿಯಿರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡಲಾಗುತ್ತದೆ’ ಎಂದು ಹೇಳಿದರು.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.