ವರಂಗಲ್: ಎರಡು ರಾಜ್ಯ ಸರ್ಕಾರಗಳ ಮಧ್ಯೆ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಒಪ್ಪಂದಗಳು ನಡೆದಿರುವುದು ಇದೇ ಮೊದಲು ಎಂದು ಎಎಪಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಗುರಿಯಾಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ₹6.100 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಹೀಗೆ ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ‘ಮೊದಲೆಲ್ಲಾ ಎರಡು ದೇಶಗಳ ಅಥವಾ ರಾಜ್ಯಗಳ ನಡುವೆ ಅಭಿವೃದ್ಧಿ ವಿಚಾರಕ್ಕೆ ಏರ್ಪಟ್ಟಿರುವ ಒಪ್ಪಂದಗಳ ಕುರಿತು ಸುದ್ದಿಗಳಿರುತ್ತಿದ್ದವು. ನೀರು ಹಂಚಿಕೆ ಕುರಿತು ಎರಡು ರಾಜ್ಯಗಳ ನಡುವೆ ಏರ್ಪಟ್ಟ ಸುದ್ದಿಗಳು ಇರುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಎರಡು ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಭ್ರಷ್ಟಾಚಾರದ ವಿಚಾರವಾಗಿ ಒಪ್ಪಂದ ಮಾಡಿಕೊಂಡ ಆರೋಪದ ಕುರಿತ ಸುದ್ದಿ ಕೇಳುತ್ತಿದ್ದೇವೆ. ಇದು ದುರದೃಷ್ಟಕರ’ ಎಂದರು.
ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ‘ಕೇಂದ್ರ ಸರ್ಕಾರವನ್ನು ನಿಂದಿಸಲು ಬಿಆರ್‌ಎಸ್ ಸರ್ಕಾರವು ಶಬ್ದಕೋಶದಲ್ಲಿರುವ ಎಲ್ಲಾ ಪದಗಳನ್ನೂ ಬಳಸಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರವು ಕಡು ಭ್ರಷ್ಟ ಸರ್ಕಾರವಾಗಿದ್ದು, ಭ್ರಷ್ಟಾಚಾರ ಆರೋಪದಿಂದ ಮುಕ್ತವಾದ ಒಂದೂ ಯೋಜನೆಯೂ ತೆಲಂಗಾಣದಲ್ಲಿ ಇಲ್ಲ. ‘ಈ ಬಾರಿ ಬಿಜೆಪಿ ಸರ್ಕಾರ’ ಎಂದು ತೆಲಂಗಾಣವು ಹೇಳುತ್ತಿದೆ’ ಎಂದು ಹೇಳಿದರು.
ಸ್ವರ್ಣಯುಗ: 21ನೇ ಶತಮಾನವು ಸ್ವರ್ಣಯುಗವಾಗಿದ್ದು, ತ್ವರಿತಗತಿಯ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ದೇಶದ ಯಾವ ಭಾಗವೂ ಹಿಂದೆ ಉಳಿಯಬಾರದು ಎಂದು ಮೋದಿ ಹೇಳಿದರು.
ಸಂಪೂರ್ಣ ಜಗತ್ತೇ ಇಂದು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದೆ. ಇಂದಿನ ಭಾರತವು ಸಾಕಷ್ಟು ಶಕ್ತಿ ಹೊಂದಿದೆ ಎಂದರು.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡಿ, ದೇಶದ ಮೂಲಭೂತ ಸೌಕರ್ಯಕ್ಕೆ ಮೋದಿ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ₹1.10 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳ ಕಾಮಗಾರಿಯು ತೆಲಂಗಾಣದಲ್ಲಿ ಸಂಪೂರ್ಣವಾಗಿವೆ ಅಥವಾ ಇನ್ನೂ ಪ್ರಗತಿಯಲ್ಲಿದೆ. 2024ರ ಅಂತ್ಯದ ವೇಳೆಗೆ ತೆಲಂಗಾಣದಲ್ಲಿ ₹2 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು ಸಂಪೂರ್ಣವಾಗಿರುತ್ತವೆ ಎಂದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯ ಪ್ರಸಿದ್ಧ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇಂದ್ರ ಪ್ರವಾಸೋದ್ಯಮ ಸಚಿವ, ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಜಿ. ಕೃಷ್ಣ ರೆಡ್ಡಿ ಅವರು ಮೋದಿ ಅವರ ಜೊತೆಗೂಡಿದ್ದರು.
ರಾಜಸ್ಥಾನ: ₹24300 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ
ಜೈಪುರ (ಪಿಟಿಐ): ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ₹24300 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.
ಬಿಕಾನೇರ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ವರ್ಚುವಲ್ ಆಗಿ ಅವರು ಈ ಯೋಜನೆಗಳಿಗೆ ಚಾಲನೆ ನೀಡಿದರು. ಅಮೃತಸರ– ಜಾಮ್‌ನಗರದ ಆರ್ಥಿಕ ಕಾರಿಡಾರ್‌ನ ಭಾಗವಾದ ಗ್ರೀನ್‌ಫೀಲ್ಡ್ ಷಟ್ಪಥ ಹೆದ್ದಾರಿ ಮತ್ತು 30 ಹಾಸಿಗೆಗಳ ಸಾಮರ್ಥ್ಯದ ಸಿಬ್ಬಂದಿ ರಾಜ್ಯ ವಿಮಾ ನಿಗಮ ಆಸ್ಪತ್ರೆಯ (ಇಎಸ್‌ಐಸಿ) ಉದ್ಘಾಟನೆ ನೆರವೇರಿಸಿದರು.
ಬಿಕಾನೇರ್ ರೈಲ್ವೆ ನಿಲ್ದಾಣದ ಮರುಅಭಿವೃದ್ಧಿ ಮತ್ತು ಚುರು– ರತ್ನಗಢ ನಿಲ್ದಾಣಗಳ ನಡುವೆ ಜೋಡಿ ಹಳಿ ರೈಲ್ವೆ ಮಾರ್ಗ ನಿರ್ಮಾಣಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.