ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಗಾಢಗೊಳಿಸುವ ಬಗ್ಗೆ ವ್ಯಾಪಕವಾದ ವಿಷಯಗಳನ್ನು ಚರ್ಚೆ ಒಳಗೊಂಡಿತ್ತು.
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಜೋ ಬೈಡನ್ ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಮಾತುಕತೆ ನಡೆದಿದೆ.
‘ಅವರ ಚರ್ಚೆಯು ಭಾರತ ಮತ್ತು ಅಮೆರಿಕದ ನಡುವೆ ಬಾಂಧವ್ಯ ವೃದ್ಧಿ ಕುರಿತಾದ ವ್ಯಾಪಕ ಅಂಶಗಳನ್ನು ಒಳಗೊಂಡಿತ್ತು’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಅಮೆರಿಕ ಹಣಕಾಸು ಇಲಾಖೆಯ ಕಾರ್ಯದರ್ಶಿ ಜನೆತ್ ಯೆಲ್ಲೆನ್, ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್, ಅಮೆರಿಕದ ಎನ್‌ಎಸ್‌ಎ ಜೇಕ್ ಸುಲ್ಲಿವನ್ ಸಹ ಸಭೆಯಲ್ಲಿ ಹಾಜರಿದ್ದರು. ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್, ಎನ್‌ಎಸ್‌ಎ ಅಜಿತ್ ಢೋಬಾಲ್ ಸಹ ಭಾರತದ ಪರವಾಗಿ ಹಾಜರಿದ್ದರು.
ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವ ನಾಯಕರು ದೆಹಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿ ಮುಂದಿನ ಕೆಲ ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಈ ಸಭೆಗಳು ಈ ರಾಷ್ಟ್ರಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಲು ಮತ್ತು ಅಭಿವೃದ್ಧಿ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಅವಕಾಶವನ್ನು ನೀಡುತ್ತವೆ ಎಂದು ಪ್ರಧಾನಿ ಈ ಹಿಂದೆ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.