ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಸ್ತುತ ರಾಜಕೀಯ ಎಂದರೆ ಸಮಾಜ ಸೇವೆಯಲ್ಲ; ಅಧಿಕಾರವಷ್ಟೇ: ಸಚಿವ ನಿತಿನ್ ಗಡ್ಕರಿ

Published : 27 ಸೆಪ್ಟೆಂಬರ್ 2024, 13:31 IST
Last Updated : 27 ಸೆಪ್ಟೆಂಬರ್ 2024, 13:31 IST
ಫಾಲೋ ಮಾಡಿ
Comments

ಛತ್ರಪತಿ ಸಾಂಭಾಜಿನಗರ: ‘ರಾಜಕಾರಣ ಎಂದರೆ ಸಮಾಜ ಸೇವೆ, ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿ ಎಂಬ ವ್ಯಾಖ್ಯಾನವಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಇದು ಕೇವಲ ‘ಅಧಿಕಾರ’ ಎಂದಷ್ಟೇ ಹೇಳಬಹುದು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ರಾಜಕೀಯದಲ್ಲಿ ಅಭಿಪ್ರಾಯ ಭೇದ ಎಂಬ ಸಮಸ್ಯೆ ಎದುರಾಗುವುದು ತೀರಾ ವಿರಳ. ಆದರೆ ಉತ್ತಮ ಆಲೋಚನೆಗಳ ಕೊರತೆಯಂತೂ ಎದುರಾಗುತ್ತದೆ. ಹೀಗಾಗಿ ಇಂದು ರಾಜಕೀಯ ಎಂದರೆ ಅದು ಕೇವಲ ಅಧಿಕಾರವಷ್ಟೇ ಆಗಿದೆ’ ಎಂದರು.

‘ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೆವು. ಆಗ ನಮಗೆ ಯಾವುದೇ ಗೌರವವೂ ಸಿಗುತ್ತಿರಲಿಲ್ಲ. ಗುರುತಿಸುವವರೂ ಇರಲಿಲ್ಲ. ಜನರ ಕಲ್ಯಾಣಕ್ಕಾಗಿ, ಅತ್ಯಂತ ಬದ್ಧತೆಯಿಂದ ಹರಿಭಾವು ಬಾಗಡೆ ಅವರು ಕೆಲಸ ಮಾಡಿದ್ದರು. 20 ವರ್ಷಗಳ ಹಿಂದೆ ಪಕ್ಷದ ಕಾರ್ಯಕರ್ತನಾಗಿ ನಾನು ವಿದರ್ಭ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೆ. ನಮ್ಮ ರ‍್ಯಾಲಿಗಳ ಮೇಲೆ ಜನರು ಕಲ್ಲು ಎಸೆಯುತ್ತಿದ್ದರು’ ಎಂದು ಗಡ್ಕರಿ ಅಂದಿನ ದಿನಗಳನ್ನು ನೆನಪಿಸಿಕೊಂಡರು.

‘ತುರ್ತುಪರಿಸ್ಥಿತಿ ನಂತರದ ದಿನಗಳವು. ಆಟೊರಿಕ್ಷಾದಲ್ಲಿ ಕೂತು ಪ್ರಚಾರ ಮಾಡುತ್ತಿದ್ದ ನನ್ನ ಮೇಲೆ ಜನರು ದಾಳಿ ನಡೆಸಿದ್ದರು. ಆದರೆ ಇಂದು ನನ್ನ ಮಾತುಗಳನ್ನು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಆದರೆ ಈ ಎಲ್ಲಾ ಜನಪ್ರಿಯತೆಗಳು ನನ್ನದಲ್ಲ. ಇವೆಲ್ಲವೂ ಹರಿಭಾವು ಬಾಗಡೆ ಅವರಂತ ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗಿದೆ’ ಎಂದರು.

‘ಪಕ್ಷದಲ್ಲಿ ಯಾವುದೇ ಪ್ರಮುಖ ಹುದ್ದೆ ಸಿಗದಿದ್ದರೂ, ಉತ್ತಮ ನಡವಳಿಕೆಯೊಂದಿಗೆ ಕೆಲಸ ಮಾಡುವವರು ಮಾತ್ರ ಉತ್ತಮ ಕಾರ್ಯಕರ್ತರು ಎನಿಸಿಕೊಳ್ಳುತ್ತಾರೆ’ ಎಂದು ಗಡ್ಕರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT