ನವದೆಹಲಿ: ‘ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆಯಂಥ ಅಪರಾಧಗಳನ್ನು ತಡೆಗಟ್ಟಲು ಕಠಿಣ ಶಿಕ್ಷೆ ಮತ್ತು ತ್ವರಿತ ನ್ಯಾಯದಾನ ವ್ಯವಸ್ಥೆಯ ಅಗತ್ಯವಿದೆ’ ಎಂದು ಕಾಂಗ್ರೆಸ್ ನಾಯಕಿ, ಸಂಸದೆ ಕುಮಾರಿ ಸೆಲ್ಜಾ ಅಭಿಪ್ರಾಯಪಟ್ಟರು.
ಪಿಟಿಐ ಸಂಪಾದಕರೊಂದಿಗೆ ನಡೆಸಿದ ಮಾತುಕತೆಯಲ್ಲಿ ಶೆಲ್ಜಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರ, ಅಧಿಕಾರಿಗಳು ಇಂಥ ವಿಚಾರಗಳನ್ನು ಸೂಕ್ಷ್ಮತೆಯಿಂದ ನಿರ್ವಹಿಸಬೇಕು. ಪರಿಸ್ಥಿತಿಯು ಕೈಮೀರಿ ಹೋಗದಂತೆ ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ, ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಅನ್ನಿಸಿ ಜನರು ಪ್ರತಿಭಟಿಸುತ್ತಾರೆ. ಪಶ್ಚಿಮ ಬಂಗಾಳದ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಆದ್ದರಿಂದ ಈ ಕುರಿತು ಪ್ರತಿಕ್ರಿಯಿಸುವುದಿಲ್ಲ’ ಎಂದರು.
‘ನಗರ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕುರಿತು ಚರ್ಚೆಯಾಗುತ್ತದೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳು ವರದಿಯೇ ಆಗುವುದಿಲ್ಲ. ಒಂದು ವೇಳೆ ದೂರು ನೀಡಿದರೂ ವರದಿಯಾದರೂ ಯಾರು ತಾನೆ ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಈ ಹಂತದಲ್ಲಿ ಮಾಧ್ಯಮವು ಹೆಚ್ಚು ಜವಾಬ್ದಾರಿ ವಹಿಸಬೇಕು’ ಎಂದು ಹೇಳಿದರು.
‘ಇಂಥ ಕೃತ್ಯ ನಡೆಸುವವರಿಗೆ ಭಯವೇ ಇಲ್ಲದಂತಾಗಿದೆ. ಇವೆಲ್ಲವೂ ಕೆಲವು ದಿನಗಳಷ್ಟೆ. ಹೆಚ್ಚೆಂದರೆ ಕೆಲವು ದಿನ ಜೈಲಿನಲ್ಲಿರುತ್ತೇವೆ ಅಷ್ಟೆ ಎಂಬ ಭಾವನೆ ಇದೆ. ಇಂಥ ಅಪರಾಧ ಎಸಗುವವರಲ್ಲಿ ಭಯ ಮೂಡಿಸಬೇಕು. ಅತ್ಯಾಚಾರ ಎಸಗಿದರೆ ಅವರಿಗೆ ಆದ ಶಿಕ್ಷೆ, ನಾಳೆ ತನಗೂ ಆಗುತ್ತದೆ ಎಂದು ಭಯ ಹುಟ್ಟಿಸಬೇಕು’ ಎಂದರು.
ಅತ್ಯಾಚಾರ ಆರೋಪಿ ಆತ್ಮಹತ್ಯೆ
ಗುವಾಹಟಿ: ನಾಗಾಂವ್ ಜಿಲ್ಲೆಯ ಧೀಂಗ್ ಎಂಬಲ್ಲಿ 14 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತಫುಜಲ್ ಇಸ್ಲಾಂ ಎನ್ನುವವರು ಶನಿವಾರ ಪೊಲೀಸರ ವಶದಲ್ಲಿ ಇರುವಾಗಲೇ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲಕಿಯ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮೂವರಲ್ಲಿ ತಫುಜಲ್ ಇಸ್ಲಾಂ ಒಬ್ಬರು. ಉಳಿದ ಇಬ್ಬರು ಆರೋಪಿಗಳು ಕಾಣೆಯಾಗಿದ್ದಾರೆ. ಅತ್ಯಾಚಾರ ಎಸಗಿದ ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಹತ್ತಿರದ ಕೆರೆಯ ಬಳಿ ಮೂವರೂ ಬಿಸಾಡಿದ್ದರು. ಈ ಕೆರೆಯ ಬಳಿಗೆ ಘಟನೆಯ ಮರುಸೃಷ್ಟಿ ಮಾಡಿಸಲು ಬೆಳಿಗ್ಗೆ 3.30ರ ಸುಮಾರಿಗೆ ಆರೋಪಿಯನ್ನು ಪೊಲೀಸರು ಕರೆತಂದಿದ್ದರು.
ಆರೋಪಿಯ ಮೃತದೇಹವನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ಶನಿವಾರ ಕೆರೆಯಿಂದ ಹೊರತೆಗೆದರು
–ಪಿಟಿಐ ಚಿತ್ರ
‘ಈ ವೇಳೆ ಆರೋಪಿಯ ಕೈಗೆ ಕೋಳ ತೊಡಿಸಲಾಗಿತ್ತು. ಆರೋಪಿಯ ಜೊತೆಯಿದ್ದ ಪೊಲೀಸರ ವಶದಿಂದ ತಪ್ಪಿಸಿಕೊಂಡ ಆರೋಪಿಯು ಕೆರೆಗೆ ಹಾರಿದ. ತಕ್ಷಣವೇ ಎಸ್‌ಡಿಆರ್‌ಎಫ್ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಎರಡು ತಾಸಿನ ನಂತರ ಆರೋಪಿಯ ಮೃತದೇಹ ದೊರೆಯಿತು. ಒಬ್ಬ ಸಿಬ್ಬಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ನಾಗಾಂವ್‌ನ ಎಸ್‌ಪಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.