ನವದೆಹಲಿ: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಸುದ್ದಿಗಳು ಆತಂಕಕಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು. ಅಲ್ಲಿನ ಮಧ್ಯಂತರ ಸರ್ಕಾರ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಸಮುದಾಯದವರ ರಕ್ಷಣೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, ‘ಯಾವುದೇ ನಾಗರಿಕ ಸಮಾಜದಲ್ಲಿ ಧರ್ಮ, ಜಾತಿ, ಭಾಷೆ ಅಥವಾ ಗುರುತಿನ ಆಧಾರದ ಮೇಲೆ ತಾರತಮ್ಯ, ಹಿಂಸಾಚಾರ ಮತ್ತು ದಾಳಿ ಮಾಡುವುದು ಸರಿಯಲ್ಲ’ ಎಂದರು.
‘ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಶ್ರೀಘದಲ್ಲೇ ಸಹಜ ಸ್ಥಿತಿಗೆ ಬರಲಿದೆ. ಅಲ್ಲಿನ ಮಧ್ಯಂತರ ಸರ್ಕಾರ ಅಲ್ಪಸಂಖ್ಯಾತರ ರಕ್ಷಣೆಗೆ ನಿಲ್ಲುತ್ತದೆ ಎಂಬ ಭರವಸೆಯಿದೆ’ ಎಂದು ಹೇಳಿದರು.
ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ‘ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧರ ರಕ್ಷಣೆಗೆ ನಿಲ್ಲಿ’ ಎಂದು ಯುವಕರಿಗೆ ಕರೆ ನೀಡಿದ್ದಾರೆ.
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದ ತೊರೆದ ಬೆನ್ನಲ್ಲೇ ಅವಾಮಿ ಲೀಗ್ ಪಕ್ಷದ ಇಬ್ಬರು ಹಿಂದೂ ಮುಖಂಡರ ಹತ್ಯೆ ಮಾಡಲಾಗಿದೆ. ಹಿಂದೂಗಳ ಧಾರ್ಮಿಕ ಕೇಂದ್ರಗಳು, ಮನೆಗಳು ಮತ್ತು ವ್ಯಾಪಾರ ಸ್ಥಳಗಳ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಮೀಸಲಾತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸುಮಾರು 230 ಜನರು ಮೃತಪಟ್ಟಿದ್ದಾರೆ.