ಗುವಾಹಟಿ: ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಕೃತ್ಯ ಖಂಡಿಸಿ ಅಸ್ಸಾಂನ ವಿವಿಧೆಡೆ ಜನರು ಪ್ರತಿಭಟಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಜಿಲ್ಲೆಯ ಧಿಂಗ್‌ನಲ್ಲಿ ಗುರುವಾರ ಮನೆಪಾಠ ಮುಗಿಸಿಕೊಂಡು ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿದ್ದ ಮೂವರು ಕೃತ್ಯ ಎಸಗಿದ್ದರು.
ಕೃತ್ಯವನ್ನು ಖಂಡಿಸಿ ಧಿಂಗ್‌ನಲ್ಲಿ ವ್ಯಾಪಾರಿಗಳು ಭಾನುವಾರ ಸ್ವಪ್ರೇರಿತರಾಗಿ ವಹಿವಾಟು ಸ್ಥಗಿತಗೊಳಿಸಿದ್ದರು. ಆರೋಪಿಗಳನ್ನು ಬಂಧಿಸಬೇಕು, ಕಠಿಣ ಸಜೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ಆದರೆ, ತಪ್ಪಿಸಿಕೊಳ್ಳುವ ಯತ್ನದಲ್ಲಿ ಆತ ಕೆರೆಗೆ ಹಾರಿದ್ದು, ಮೃತಪಟ್ಟಿದ್ದಾನೆ ಎಂದು ಶನಿವಾರ ತಿಳಿಸಿದರು.
ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.