ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರದ ಗುರುದ್ವಾರ ಅಕಲಗಢ ಸಾಹಿಬ್ ಪ್ರದೇಶದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಐವರ ಮೇಲೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಯುವತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಬೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಕಾರನ್ನು ಸುತ್ತುವರೆದು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮೃತ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಹಾಗಾಗಿ ಹೊಸ ಉಡುಪುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ಯುವತಿಯನ್ನು ಜಸ್‌ಪ್ರೀತ್ ಕೌರ್ (22), ಆಕೆಯ ಸಹೋದರ ಆಕಾಶದೀಪ್ ಸಿಂಗ್ (21) ಆಕೆಯ ತಂದೆ ದಿಲ್‌ಪ್ರೀತ್ ಸಿಂಗ್ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಕಾಂಬೋಜ್ ನಗರದ ನಿವಾಸಿಗಳಾದ ಅನ್ಮೋಲ್ ಸಿಂಗ್ ಮತ್ತು ಹರ್‌ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
‘ಇದು ತ್ರಿವಳಿ ಕೊಲೆಯಾಗಿದ್ದು, ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಮೃತ ದಿಲ್‌ಪ್ರೀತ್ ಸಿಂಗ್ ಅಪರಾಧ ಹಿನ್ನೆಲೆಯನ್ನು ಹೊಂದಿದ್ದಾರೆ’ ಎಂದು ಫಿರೋಜ್‌ಪುರದ ಡಿಐಜಿ ಅಜಯ್ ಮಲುಜಾ ತಿಳಿಸಿದ್ದಾರೆ.
‘ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರು ಮಂದಿ ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ. ಪ್ರಕರಣವು ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ’ ಎಂದು ಅಜಯ್ ಹೇಳಿದ್ದಾರೆ.