ಹೈದರಾಬಾದ್: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್ 18ರಂದು ಜಗ್ತಿಯಾಲದಲ್ಲಿ ಪಕ್ಷದ ‘ವಿಜಯಭೇರಿ’ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ತೆಲಂಗಾಣಕ್ಕೆ ಸೋನಿಯಾ ಗಾಂಧಿ ಘೋಷಿಸಿದ ‘ಆರು ಗ್ಯಾರಂಟಿ’ಗಳ ಸಂದೇಶವನ್ನು ಜನರಿಗೆ ತಲುಪಿಸುವ ಗುರಿ ಹೊಂದಿರುವ ಬಸ್ ಯಾತ್ರೆಯು 12 ದಿನಗಳಲ್ಲಿ 35 ವಿಧಾನಸಭಾ ಕ್ಷೇತ್ರಗಳಿಗೆ ತೆರಳಲಿದೆ.
ದಿನಕ್ಕೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂವಾದ, ಸಾರ್ವಜನಿಕ ಸಭೆಗಳು ನಡೆಯುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಪಕ್ಷದ ಇತರ ಹಿರಿಯ ನಾಯಕರು ಸಹ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮುಲುಗು ರಾಮಯ್ಯ ಮಂದಿರದಿಂದ ರಾಹುಲ್ ಗಾಂಧಿ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮರುದಿನ ಅವರು ಸಿಂಗರೇಣಿಯಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕರೀಂನಗರ ಪಟ್ಟಣದಲ್ಲಿ ಎರಡನೇ ದಿನ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ. ಮೂರನೇ ದಿನ ಬೋಧನ್, ಅರ್ಮೂರ್ ಮತ್ತು ನಿಜಾಮಾಬಾದ್‌ನಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.