ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಕೋರ್ಟ್

Last Updated 20 ಏಪ್ರಿಲ್ 2023, 22:45 IST
ಅಕ್ಷರ ಗಾತ್ರ

ಸೂರತ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾನನಷ್ಟ ಪ್ರಕರಣದಲ್ಲಿ ವಿಧಿಸಲಾಗಿರುವ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್‌.ಪಿ. ಮೊಗೇರ, ‘ನೀವು ಲೋಕಸಭಾ ಸದಸ್ಯರಾಗಿದ್ದವರು ಹಾಗೂ ದೇಶದ ಎರಡನೇ ಅತಿ ದೊಡ್ಡ ರಾಜಕೀಯ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದವರು. ಹೀಗಾಗಿ, ಪದಗಳನ್ನು ಬಳಸುವಾಗ ನೀವು (ರಾಹುಲ್‌) ಎಚ್ಚರದಿಂದ ಇರಬೇಕಿತ್ತು’ ಎಂದು ಹೇಳಿದರು.

‘ರಾಹುಲ್‌ ಅವರಂತಹ ವ್ಯಕ್ತಿಯಿಂದ ಸಭ್ಯ ನಡವಳಿಕೆಗೆ ಸಂಬಂಧಿಸಿ ಅಧಿಕ ನಿರೀಕ್ಷೆ ಇರುತ್ತದೆ’ ಎಂದ ನ್ಯಾಯಾಧೀಶರು, ‘ಕಾನೂನಿನಡಿ ಅವಕಾಶವಿರುವಷ್ಟು ಪ್ರಮಾಣದ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ವಿಧಿಸಿದೆ’ ಎಂದರು.‌

ಶಿಕ್ಷೆಗೆ ತಡೆ ನೀಡದೇ ಇದ್ದರೆ, ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 8(3)ರ ಪ್ರಕಾರ, ರಾಹುಲ್‌ ಅವರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುವುದಿಲ್ಲ. ಹಾಗಾದರೆ, ಅವರಿಗೆ ಸರಿಪಡಿಸಲಾರದಷ್ಟು ಹಾನಿ ಆಗುತ್ತದೆ ಎಂಬುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿಲ್ಲ ಎಂದರು.

‘ಯಾವುದೇ ಮಾನಹಾನಿಕರ ಪದಗಳು ನಿಂದನೆಗೆ ಒಳಗಾದ ವ್ಯಕ್ತಿಗೆ ಮಾನಸಿಕ ಹಿಂಸೆಗೆ ಕಾರಣವಾಗುತ್ತವೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ದೂರುದಾರರಾದ ಪೂರ್ಣೇಶ್ ಮೋದಿ ಅವರಿಗೆ, ಮಾನಹಾನಿಕರ ಪದಗಳ ಬಳಕೆ ಹಾಗೂ ಮೋದಿ ಉಪನಾಮ ಹೊಂದಿರುವವರನ್ನು ಕಳ್ಳರಿಗೆ ಹೋಲಿಕೆ ಮಾಡಿದ್ದರಿಂದ ಮಾನಸಿಕ ನೋವುಂಟಾಗಿರುತ್ತದೆ. ಅವರ ಗೌರವಕ್ಕೆ ಧಕ್ಕೆ ಉಂಟಾಗಿದೆ’ ಎಂದೂ ಹೇಳಿದ್ದಾರೆ.

ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ಪ್ರಶ್ನಿಸಿದ್ದರು. ಅದನ್ನು ಪ್ರಶ್ನಿಸಿ ಸೂರತ್‌ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸೂರತ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್‌ 23ರಂದು ತೀರ್ಪು ನೀಡಿತ್ತು.

ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದ ನ್ಯಾಯಾಲಯ, ತೀರ್ಪನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿದೆ. ಜೈಲು ಶಿಕ್ಷೆ ಪ್ರಕಟಗೊಂಡ ಮಾರನೇ ದಿನವೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು.

ಹೋರಾಟ ಮುಂದುವರಿಕೆ–ಕಾಂಗ್ರೆಸ್: ಸೂರತ್‌ ಸೆಷನ್ಸ್‌ ನ್ಯಾಯಾಲಯವು ರಾಹುಲ್‌ ಗಾಂಧಿ ಅವರ ಅರ್ಜಿಯನ್ನು ತಿರಸ್ಕರಿಸಿದ್ದರೂ ಕಾನೂನಿನಡಿ ಲಭ್ಯವಿರುವ ಎಲ್ಲ ಆಯ್ಕೆಗಳನ್ನು ಬಳಸಿಕೊಂಡು, ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಇದು ರಾಜಕೀಯ ಪ್ರೇರಿತ ಪ್ರಕರಣ. ನಮಗೆ ಭಾರತದ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸ ಇದ್ದು, ಹೋರಾಟ ಮುಂದುವರಿಯಲಿದೆ’ ಎಂದು ಕಾಂಗ್ರೆಸ್‌ನ ಮುಖಂಡ ಭೂಪಿಂದರ್‌ ಸಿಂಗ್ ಹೂಡಾ ಹೇಳಿದ್ದಾರೆ.

‘ಕ್ಷಮೆ ಯಾಚಿಸಲು ಇನ್ನೂ ಸಮಯ ಇದೆ’

ನವದೆಹಲಿ: ‘ದೇಶದ ಕ್ಷಮೆ ಯಾಚಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಈಗಲೂ ಅವಕಾಶ ಇದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಗುರುವಾರ ಹೇಳಿದ್ದಾರೆ.‌

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಹಾಗೂ ಅವರ ವಿರುದ್ಧ ದಾಳಿ ಮಾಡುವ ನೆಪದಲ್ಲಿ ಕಾಂಗ್ರೆಸ್‌ ರಾಜಮನೆತನವು ದೇಶದ ಇತರ ಹಿಂದುಳಿದ ಸಮುದಾಯವನ್ನು (ಒಬಿಸಿ) ಉದ್ದೇಶಪೂರ್ವಕವಾಗಿ ಅವಮಾನಿಸಿತ್ತು. ಮಾನನಷ್ಟ ಮೊಕದ್ದಮೆಯಲ್ಲಿ ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸೆಷನ್ಸ್‌ ನ್ಯಾಯಾಲಯದ ಕ್ರಮ ಇದನ್ನು ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ’ ಎಂದು ಠಾಕೂರ್‌ ಹೇಳಿದ್ದಾರೆ.

‘ಹೈಕೋರ್ಟ್‌ಗೆ ಮೊರೆ’

ರಾಹುಲ್‌ ಗಾಂಧಿ ಅವರ ಅರ್ಜಿಯನ್ನುತಿರಸ್ಕರಿಸಿ ಸೂರತ್‌ನ ಸೆಷನ್ಸ್‌ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ರಾಹುಲ್‌ ಪರ ವಕೀಲ ಕಿರೀಟ್‌ ಪಾನ್‌ವಾಲಾ ಹೇಳಿದ್ದಾರೆ. ‘ಏಪ್ರಿಲ್‌ 3ರ ಆದೇಶದಂತೆ, ರಾಹುಲ್‌ ಗಾಂಧಿ ಅವರು ಜಾಮೀನಿನ ಮೇಲೆ ಇರುತ್ತಾರೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT