ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಇಲ್ಲಿನ ಆನಂದ ವಿಹಾರ ರೈಲು ನಿಲ್ದಾಣದಲ್ಲಿ ಹಮಾಲರ ಜತೆಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದರು.
ಹಮಾಲರ ಹೆಗ್ಗುರುತಿನ ಕೆಂಪು ಬಣ್ಣದ ಅಂಗಿ ಧರಿಸಿ, ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತುಕೊಂಡು ರಾಹುಲ್ ಗಾಂಧಿಯವರೂ ಹಮಾಲರ ಜತೆಗೆ ಸಾಮಾನ್ಯ ಕಾರ್ಮಿಕನಂತೆ ಬೆರೆತು ಗಮನ ಸೆಳೆದರು. ನಂತರ ಹಮಾಲಿಗಳ ಜತೆ ಕುಳಿತುಕೊಂಡು, ಅವರ ಸಮಸ್ಯೆಗಳನ್ನು ಆಲಿಸಿ, ಅರ್ಥಮಾಡಿಕೊಳ್ಳಲುವ ಪ್ರಯತ್ನ ಮಾಡಿದರು.
ಹಮಾಲರೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ನಡೆಸುತ್ತಿರುವ ಚಿತ್ರವನ್ನು ಕಾಂಗ್ರೆಸ್, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿನ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
‘ಇತ್ತೀಚೆಗೆ, ರೈಲ್ವೆ ನಿಲ್ದಾಣದ ಹಮಾಲಿಗಳು ರಾಹುಲ್ ಗಾಂಧಿಯವರನ್ನು ಭೇಟಿಯಾಗಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದ ವಿಡಿಯೊವೊಂದು ವ್ಯಾಪಕವಾಗಿ ಹರಿದಾಡಿತ್ತು. ಈ ದಿನ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಅವರ ಮಾತುಗಳನ್ನು ಆಲಿಸಿದರು. ಭಾರತ್ ಜೋಡೊ ಯಾತ್ರೆ ಮುಂದುವರಿಯುತ್ತದೆ’ ಎಂದು ಪಕ್ಷವು ಹೇಳಿದೆ.
‘ನನ್ನ ಮನಸ್ಸಿನಲ್ಲಿ ಬಹಳ ಸಮಯದಿಂದಲೂ ಈ ಆಸೆ ಇತ್ತು. ಅವರು ನನ್ನನ್ನು ತುಂಬಾ ಪ್ರೀತಿಯಿಂದ ಕರೆದಿದ್ದರು. ಕಷ್ಟಪಟ್ಟು ದುಡಿಯುವ ಭಾರತದ ಈ ಸಹೋದರರ ಆಶಯವನ್ನು ಯಾವುದೇ ಬೆಲೆ ತೆತ್ತಾದರೂ ಈಡೇರಿಸಬೇಕು’ ಎಂದು ರಾಹುಲ್ ಗಾಂಧಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.