ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾದ ಬೆನ್ನಲ್ಲೇ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್, ‘ಒಂಬತ್ತು ವರ್ಷದ ಹಿಂದೆ ಮುಂಬೈನಲ್ಲಿ ನಾನು ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದೆ. ಅಲ್ಲಿಂದ ಶುರುವಾದ ಸ್ನೇಹ ಇಂದಿಗೂ ಮುಂದುವರೆದಿದೆ. ಈಗಲೂ ಫೋನ್‌ನಲ್ಲಿ ಮಾತನಾಡುತ್ತೇವೆ. ಐದು ವರ್ಷಗಳ ಹಿಂದೆ ಶೂಟಿಂಗ್ ಸಲುವಾಗಿ ಲಖನೌಗೆ ಬಂದಿದ್ದು, ಆಗ ಅಖಿಲೇಶ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇಂದು ಸ್ನೇಹಿತನನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.
ರಜನಿಕಾಂತ್ ಅವರೊಂದಿಗಿನ ಭೇಟಿಯ ಫೋಟೊಗಳನ್ನು ತಮ್ಮ ಟ್ವಿಟರ್(ಎಕ್ಸ್)ನಲ್ಲಿ ಹಂಚಿಕೊಂಡಿರುವ ಅಖಿಲೇಶ್ ಯಾದವ್, ಒಂಬತ್ತು ವರ್ಷದ ನಂತರ ಭೇಟಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
‘ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ರಜನಿಕಾಂತ್ ಅವರನ್ನು ತೆರೆಯ ಮೇಲೆ ನೋಡಿದ ಖುಷಿ ಈಗಲೂ ಅಚ್ಚಳಿಯದೆ ಉಳಿದಿದೆ. 9 ವರ್ಷಗಳ ಹಿಂದೆ ವೈಯಕ್ತಿಕವಾಗಿ ಭೇಟಿಯಾಗಿದ್ದೇವು. ಇಂದಿಗೂ ಆ ಸ್ನೇಹ ಹಾಗೆ ಇದೆ’ ಎಂದು ಹೇಳಿದ್ದಾರೆ.
‘ಜೈಲರ್’ ಚಿತ್ರದ ಪ್ರಚಾರದ ಸಲುವಾಗಿ ಶುಕ್ರವಾರ ಲಖನೌಗೆ ಬಂದಿದ್ದ ರಜನಿಕಾಂತ್, ಶನಿವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದ್ದರು. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರೊಂದಿಗೆ ‘ಜೈಲರ್’ ಸಿನೆಮಾ ವೀಕ್ಷಿಸಿದ್ದರು.
ಅಖಿಲೇಶ್ ಯಾದವ್ ಭೇಟಿ ನಂತರ ರಜನಿಕಾಂತ್ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಓದಿ... ಅಯೋಧ್ಯೆ: ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ರಜನಿಕಾಂತ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.