ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟುಡಿಯೊ ಸಾಲದ ಹೊರೆ ತಾಳದೇ ಬಾಲಿವುಡ್ ಕಲಾನಿರ್ದೇಶಕ ನಿತಿನ್ ದೇಸಾಯಿ ಆತ್ಮಹತ್ಯೆ!

Published 2 ಆಗಸ್ಟ್ 2023, 11:42 IST
Last Updated 2 ಆಗಸ್ಟ್ 2023, 11:42 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಲಗಾನ್, ಹಮ್‌ ದಿಲ್ ದೇ ಚುಕೇ ಸನಮ್‌, ಜೋದಾ ಅಕ್ಬರ್ ಸೇರಿದಂತೆ ಹಲವು ಹಿಟ್ ಚಿತ್ರಗಳ ಕಲಾ ನಿರ್ದೇಶಕ ನಿತಿನ್ ದೇಸಾಯಿ (57), ತಮ್ಮ ಎನ್‌ಡಿ ಸ್ಟುಡಿಯೊಗಾಗಿ ಪಡೆದಿದ್ದ ಸಾಲವನ್ನು ಕಾಲಮಿತಿಯೊಳಗೆ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದೆನ್ನಲಾಗಿದೆ

ಮಹಾರಾಷ್ಟ್ರದ ರಾಯ್‌ಗಡ್ ಜಿಲ್ಲೆಯ ಕರ್ಜಾತ್‌ನಲ್ಲಿ ನಿರ್ಮಿಸಿರುವ ಎನ್‌ಡಿ ಸ್ಟುಡಿಯೊದಲ್ಲಿ ಬುಧವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿತಿನ್ ಅವರ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಸಹಜ ಸಾವು ಎಂಬ ಪ್ರಕರಣ ಖಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ನಿತಿನ್, ₹252 ಕೋಟಿ ಸಾಲ ಹೊತ್ತಿದ್ದರು. ಇದನ್ನು ಕಾಲಮಿತಿಯೊಳಗೆ ತೀರಿಸದ ಕಾರಣ ನ್ಯಾಯಾಲಯ ಕಳೆದ ವಾರ ನೋಟಿಸ್ ನೀಡಿತ್ತು.

ನಿತಿನ್ ಅವರ ಸಾವಿನ ಕುರಿತು ಪ್ರತಿಕ್ರಿಯಿಸಿದ ಶಾಸಕ ಮಹೇಶ ಬಾಲ್ದಿ, ‘ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದ ನಿತಿನ್, ಎರಡು ತಿಂಗಳ ಹಿಂದೆ ನನ್ನ ಬಳಿ ಈ ವಿಷಯವನ್ನು ಹಂಚಿಕೊಂಡಿದ್ದರು. ತಮ್ಮ ಎನ್‌ಡಿ ಸ್ಟುಡಿಯೊ ಪರಿಸ್ಥಿತಿ ಉತ್ತಮವಾಗಿಲ್ಲ. ಚಿತ್ರೀಕರಣಗಳು ನಡೆಯುತ್ತಿಲ್ಲ. ಮಳೆಗಾಲದ ನಂತರ ಚಿತ್ರಗಳು ಬರಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದರು. ಆರ್ಥಿಕ ಸಂಕಷ್ಟವೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಿರಬಹುದು’ ಎಂದಿದ್ದಾರೆ.

'ಸ್ಥಳೀಯರ ಪ್ರಕಾರ ನಿತಿನ್ ದೇಸಾಯಿ ಅವರು ಮಂಗಳವಾರ ಸಂಜೆ ಸ್ಟುಡಿಯೊಗೆ ಬಂದಿದ್ದರು. ಅಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದ ಮುಖ್ಯ ವೇದಿಕೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಸುದ್ದಿ ತಿಳಿದು ಅಲ್ಲಿಗೆ ಹೋದೆವು ಎಂದಿದ್ದಾರೆ’ ಎಂದು ತಿಳಿಸಿದರು.

‘ಬುಧವಾರ ಬೆಳಿಗ್ಗೆ 9ಕ್ಕೆ ಎನ್‌ಡಿ ಸ್ಟುಡಿಯೊದಲ್ಲಿ ನಿತಿನ್ ಮೃತದೇಹ ಪತ್ತೆಯಾಯಿತು. ಸೈಬರ್ ವಿಧಿವಿಜ್ಞಾನ ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ ಸಂಗ್ರಹಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘಾರ್ಗೆ ತಿಳಿಸಿದರು.

ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಶವವಾಗಿ ಪತ್ತೆ

ದೇಸಾಯಿ ಅವರ ಎನ್‌ಡಿ ಆರ್ಟ್‌ ವರ್ಲ್ಡ್‌ ಕಂಪನಿಯು, ಎರಡು ಆರ್ಥಿಕ ಸಂಸ್ಥೆಗಳಿಂದ ಒಟ್ಟು ₹185 ಕೋಟಿ ಸಾಲವನ್ನು ಕ್ರಮವಾಗಿ 2016 ಹಾಗೂ 2018ರಲ್ಲಿ ಪಡೆದಿದ್ದರು. ಇದನ್ನು 2020ರ ಜನವರಿಯಿಂದ ಬಡ್ಡಿ ಸಹಿತ ತೀರಿಸಿರುವ ಕರಾರು ಇತ್ತು. ಕಂಪನಿಯು ಕೆಲವೊಂದು ಹೋಟೆಲ್‌, ರೆಸ್ಟೂರೆಂಟ್‌, ಶಾಪಿಂಗ್‌ ಮಾಲ್ ಹಾಗೂ ರಿಕ್ರಿಯೇಷನ್ ಕೇಂದ್ರಗಳಲ್ಲಿನ ಕೆಲವೊಂದು ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. 

ನಿತಿನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ ಶೋಕ ವ್ಯಕ್ತಪಡಿಸಿದ್ದಾರೆ. ‘ಇದು ತನಗೆ ಹಾಗೂ ಸಿನಿಮಾ ರಂಗಕ್ಕೆ ಭರಿಸಲಾಗದ ನಷ್ಟ ಮತ್ತು ಅತ್ಯಂತ ಶೋಖದ ದಿನ’ ಎಂದಿದ್ದಾರೆ.

ಶರದ್ ಪವಾರ್‌ ಅವರೂ ಕಂಬನಿ ಮಿಡಿದು, ‘ಮರಾಠಿಯು ಒಬ್ಬ ಕಠಿಣ ಪರಿಶ್ರಮದ ಉತ್ತಮ ಉದ್ಯಮಿಯನ್ನು ಕಳೆದುಕೊಂಡಿದೆ’ ಎಂದಿದ್ದಾರೆ.

ಚಿತ್ರರಂಗದ ಹೇಮಾ ಮಾಲಿನಿ, ರಿತೇಷ್ ದೇಶಮುಖ್, ಸಿದ್ಧಾರ್ಥ ಬಾಸು, ನೀಲ್ ನಿತಿನ್ ಮುಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ನಿತಿನ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಪ್ರಸಿದ್ಧ ಟಿ.ವಿ. ಕಾರ್ಯಕ್ರಮಗಳಾದ ಕೌನ್ ಬನೇಗಾ ಕರೋಡ್‌ಪತಿ, ಕಮ್ಜೋರ್‌ ಕಡಿ, ಹಾರ್ಟ್‌ಬೀಟ್, ಬ್ಲಫ್‌ಮಾಸ್ಟರ್, ದಸ್‌ ಕಾ ದಮ್‌, ಸಚ್‌ ಕಾ ಸಾಮ್ನಾದಲ್ಲಿ ನಿತಿನ್ ದೇಸಾಯಿ ಅವರ ಕಲೆಯ ಕೈಚಳವನ್ನು ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT