ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹ: ಸಮಿತಿ ರಚನೆಗೆ ಕೇಂದ್ರ ಒಪ್ಪಿಗೆ

Published 3 ಮೇ 2023, 14:23 IST
Last Updated 3 ಮೇ 2023, 14:23 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗ ಜೋಡಿಯು ತಮ್ಮ ನಿತ್ಯದ ಬದುಕಿನಲ್ಲಿ ಎದುರಿಸುತ್ತಿರುವ ಕೆಲ ಸಮಸ್ಯೆಗಳನ್ನು ಆಡಳಿತಾತ್ಮಕ ನೆಲೆಯಲ್ಲಿ ಪರಿಹರಿಸುವುದಕ್ಕೆ ಇರುವ ಮಾರ್ಗೋಪಾಯಗಳನ್ನು ಅನ್ವೇಷಿಸಲು ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ. 

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಿತು.

ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ನಿಜವಾದ ಮಾನವೀಯ ಕಾಳಜಿಯ‌ನ್ನು ಒಳಗೊಂಡ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸರ್ಕಾರ ಸಿದ್ಧವಿದೆ. ಇದಕ್ಕೆ ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ನಡುವೆ ಸಮನ್ವಯದ ಅಗತ್ಯವಿದೆ. ಹೀಗಾಗಿ ಸಂಪುಟ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುತ್ತದೆ’ ಎಂದು ಹೇಳಿದರು.

‘ಅರ್ಜಿದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಮಗೆ ಮಾಹಿತಿ ನೀಡಬಹುದು. ಅಗತ್ಯ ಸಲಹೆಗಳನ್ನೂ ಒದಗಿಸಬಹುದು. ಸಮಿತಿಯು ಇವುಗಳ ಕುರಿತು ಪರಿಶೀಲನೆ ನಡೆಸಲಿದೆ. ಸಮಸ್ಯೆಗಳನ್ನು ಬಗೆಹರಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಇದೆಯೇ ಎಂಬುದರ ಕುರಿತು ಪರಾಮರ್ಶೆ ನಡೆಸಿ, ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ’ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಎಸ್‌.ರವೀಂದ್ರ ಭಟ್‌, ಹಿಮಾ ಕೊಹ್ಲಿ ಮತ್ತು ‍ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.

‘ಅರ್ಜಿದಾರರು ಪೂರ್ವಗ್ರಹಕ್ಕೆ ಒಳಗಾಗದೆಯೇ ತಾವು ಎದುರಿಸುತ್ತಿರುವ ನೈಜ ಸಮಸ್ಯೆಗಳ ಕುರಿತ ಮಾಹಿತಿ ಅಥವಾ ಸಲಹೆಯನ್ನು ಅಟಾರ್ನಿ ಜನರಲ್‌ ಅಥವಾ ಸಾಲಿಸಿಟರ್‌ ಜನರಲ್ ಅವರಿಗೆ ಒದಗಿಸಬಹುದು’ ಎಂದು ನ್ಯಾಯಪೀಠ ಹೇಳಿತು.

‘ಅರ್ಜಿದಾರರು ಹಾಗೂ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿರುವ ವಕೀಲರು ಸಭೆಯೊಂದನ್ನು ನಡೆಸಿ ಈ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಸಿಜೆಐ ಚಂದ್ರಚೂಡ್‌, ಉಭಯ ಬಣದವರಿಗೂ ಸಲಹೆ ನೀಡಿದರು.

ಅರ್ಜಿದಾರರೊಬ್ಬರ ಪರವಾಗಿ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. ‘ಸಭೆ ನಡೆಸುವುದು ಹಾಗೂ ಸಲಹೆಗಳನ್ನು ನೀಡುವುದಕ್ಕೆ ಅಭ್ಯಂತರವೇನೂ ಇಲ್ಲ. ಈ ವಿಚಾರದಲ್ಲಿ ಜಟಿಲ ಸಮಸ್ಯೆಗಳಿವೆ. ಹೀಗಾಗಿ ನ್ಯಾಯಾಲಯವೇ ಇದನ್ನು ಇತ್ಯರ್ಥಗೊಳಿಸುವುದು ಉತ್ತಮ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡದಿದ್ದರೆ ವೈದ್ಯಕೀಯ, ಪಿಂಚಣಿ, ದತ್ತು ಪಡೆಯುವುದೂ ಸೇರಿದಂತೆ ಇನ್ನಿತರ ಹಕ್ಕುಗಳಿಂದ ತಾವು ವಂಚಿತರಾಗುತ್ತೇವೆ ಎಂದು ಅರ್ಜಿದಾರರು ವಾದಿಸಿದ್ದಾರೆ. 

ಏಪ್ರಿಲ್‌ 27ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ‘ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸದೆಯೇ ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆಯುವುದು, ಭವಿಷ್ಯ ನಿಧಿ ಹಾಗೂ ಗ್ರ್ಯಾಚುಟಿಗೆ ಸಂಗಾತಿಯ ಹೆಸರನ್ನು ನಾಮನಿರ್ದೇಶನ ಮಾಡುವುದು ಸೇರಿದಂತೆ ಇತರೆ ಪ್ರಯೋಜನಗಳನ್ನು ಸಲಿಂಗ ಜೋಡಿಗೆ ಒದಗಿಸಲು ಸಾಧ್ಯವೇ’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. 

ಆಯ್ದ ಗುಂಪಿನ ಅಭಿಪ್ರಾಯ ಪರಿಗಣಿಸುವುದಿಲ್ಲ:

‘ಸಂವಿಧಾನದ ಆದೇಶದ ಅನುಸಾರವಾಗಿಯೇ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ನಾವು ಜನಪ್ರಿಯ ನೈತಿಕತೆ ಅಥವಾ ಆಯ್ದ ಗುಂಪಿನ ಅಭಿಪ್ರಾಯವನ್ನು ಪರಿಗಣಿಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರೊಬ್ಬರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಸೌರಭ್‌ ಕೃಪಾಲ್‌, ‘ವಿವಿಧ ಉಪನ್ಯಾಸ ಕಾರ್ಯಕ್ರಮಗಳಲ್ಲಿ ನಾವು ಸಲಿಂಗಿಗಳೊಂದಿಗೆ ಸಂವಾದ ನಡೆಸಿದ್ದೇವೆ. ಈ ಪೈಕಿ ಶೇ 99 ಮಂದಿ ಮದುವೆ ಆಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಕೂಡ ಇದೇ ವಾದವನ್ನು ನ್ಯಾಯಪೀಠದ ಮುಂದಿಟ್ಟರು. ‘ಗಣ್ಯ ವಕೀಲೆಯಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಸಾಕಷ್ಟು ಸಲಿಂಗಿ ಯುವ ಜೋಡಿಯನ್ನು ಭೇಟಿಯಾಗಿರುವೆ. ಅವರೆಲ್ಲಾ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ನಾವು ಏನು ಅನುಭವಿಸಿದ್ದೇವೆಯೋ ಅದನ್ನು ಅವರೂ ಅನುಭವಿಸುವಂತಾಗಬಾರದು. ಅದಕ್ಕೆ ಅವಕಾಶವನ್ನೂ ನೀಡಬಾರದು’ ಎಂದರು.

ಆಗ ಮಧ್ಯಪ್ರವೇಶಿಸಿದ ಸಿಜೆಐ ಚಂದ್ರಚೂಡ್‌, ‘ಮೇನಕಾ ಅವರೇ ನಿಮ್ಮ ಈ ವಾದದಲ್ಲಿ ಸಮಸ್ಯೆ ಇದೆ. ಈ ವಾದದ ಹಿಂದಿನ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಸಂವಿಧಾನದ ಮಟ್ಟದಲ್ಲಿ ಗಂಭೀರ ಸಮಸ್ಯೆ ಇದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT