ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಮೊತ್ತ ಹೆಚ್ಚಿಸಿ: ಸಂತ್ರಸ್ತರ ಧರಣಿ

ಜೋಶಿಮಠ ವಾರ್ಷಿಕ 6.65 ಸೆ.ಮೀ. ಕುಸಿತ; ಹಾನಿಯಾದ ಮನೆಗಳ ಸಂಖ್ಯೆ 723ಕ್ಕೆ ಏರಿಕೆ
Last Updated 11 ಜನವರಿ 2023, 15:37 IST
ಅಕ್ಷರ ಗಾತ್ರ

ನವದೆಹಲಿ/ಡೆಹ್ರಾಡೂನ್‌/ ಜೋಶಿಮಠ: ಮುಳುಗುತ್ತಿರುವ ಪಟ್ಟಣ ಜೋಶಿಮಠದಲ್ಲಿ ನೂರಾರು ಕಟ್ಟಡಗಳಲ್ಲಿ ಭಾರಿ ಬಿರುಕುಗಳು ಹೆಚ್ಚುತ್ತಿವೆ. ಹಾನಿಯಾದ ಕಟ್ಟಡಗಳ ಸಂಖ್ಯೆ ಬುಧವಾರ 723ಕ್ಕೆ ಏರಿದೆ. 131 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.

ಈ ಪಟ್ಟಣವು ಭಾರತೀಯ ಸೇನೆಯ ಬಹುದೊಡ್ಡ ನೆಲೆಯಾಗಿದೆ. ಚೀನಾ ಜತೆಗಿನ ವಿವಾದಿತ ಗಡಿ ತಲು‍ಪುವ ಕಾರ್ಯತಂತ್ರದ ಪ್ರಮುಖ ಮಾರ್ಗದಲ್ಲೂ ಭಾರಿ ಬಿರುಕುಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ.

ಈ ನಡುವೆ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಮತ್ತು ಒಂದೇ ಕಂತಿನಲ್ಲಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತರು ಧರಣಿ ನಡೆಸುತ್ತಿದ್ದಾರೆ.

ಬಿರುಕಿನಿಂದ ಅಸ್ತಿರವಾದ ‘ಮಲಾರಿ ಇನ್’ ಮತ್ತು ‘ಮೌಂಟ್ ವ್ಯೂ’ ಹೋಟೆಲ್‌ಗಳ ಕಟ್ಟಡಗಳ ತಕ್ಷಣದ ತೆರವಿಗೆ ರಾಜ್ಯಸರ್ಕಾರ ಸೋಮವಾರವೇ ಆದೇಶ ನೀಡಿತ್ತು. ಆದರೆ, ಹೋಟೆಲ್ ಮಾಲೀಕರು ಸೂಕ್ತ ಪರಿಹಾರ ನೀಡದೆ, ಕಟ್ಟಡ ಕೆಡವದಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಬದರೀನಾಥ ಮಾರ್ಗದ ನಿವಾಸಿಗಳು ಪರಿಹಾರ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ಮುಖ್ಯಮಂತ್ರಿಯವರ ಕಾರ್ಯದರ್ಶಿ ಮೀನಾಕ್ಷಿ ಸುಂದರಮ್ ಅವರು, ಪ್ರತಿಭಟನಕಾರರ ಜತೆ ಮತ್ತೊಮ್ಮೆ ಮಾತುಕತೆ ನಡೆಸಿದರು. ಕಟ್ಟಡಗಳ ತೆರವಿಗೆ ಸಹಕರಿಸುವಂತೆ ಸಂತ್ರಸ್ತರಿಗೆ ಮನವಿ ಮಾಡಿದರು. ‌

ಬದರೀನಾಥ ಮಾರ್ಗದ ನಿವಾಸಿಗಳ ಬೇಡಿಕೆ ಈಡೇರಿಸುವುದು ಅಸಾಧ್ಯ. ಮಾರುಕಟ್ಟೆ ದರದ ಪ್ರಕಾರ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಿದೆ. ಸ್ಥಳೀಯರ ಹಿತಾಸಕ್ತಿ ರಕ್ಷಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಂತ್ತಸ್ತ ಕುಟುಂಬಗಳಿಗೆ ಮಧ್ಯಂತರ ಪರಿಹಾರವಾಗಿ ₹1.5 ಲಕ್ಷ ನೀಡಲಾಗುವುದು. ಸ್ಥಳಾಂತರದ ಮುಂಚೆ ₹50 ಸಾವಿರ ಮತ್ತು ನಂತರ ವಿಪತ್ತು ಪರಿಹಾರವಾಗಿ ₹1 ಲಕ್ಷ ನೀಡಲಾಗುವುದು. ಬಾಡಿಗೆ ಮನೆಗಳಿಗೆ ತೆರಳುವವರಿಗೆ ಆರು ತಿಂಗಳವರೆಗೆ ಪ್ರತಿ ತಿಂಗಳು ₹4,000 ನೀಡಲಾಗುವುದು ಎಂದು ಅವರು ಹೇಳಿದರು.

‘ಪ್ರತಿಭಟನಕಾರರ ಜತೆ ಸಕಾರಾತ್ಮಕ ಮಾತುಕತೆ ನಡೆದಿದೆ. ಆದಷ್ಟು ಶೀಘ್ರ ಈ ಸಮಸ್ಯೆ ಬಗೆಹರಿಯಲಿದೆ. ಜೋಶಿಮಠದ ಎರಡು ಹೋಟೆಲ್‌ ಕಟ್ಟಡಗಳನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ವಾಸ ಯೋಗ್ಯವಲ್ಲವೆಂದು ಗುರುತಿಸಿರುವ ಮನೆಗಳನ್ನು ಕೆಡವುತ್ತಿಲ್ಲ. ಅಪಾಯದ ವಲಯದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಮಾತ್ರ ಆ ಮನೆಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ’ ಎಂದು ಭೂಕುಸಿತ ಪೀಡಿತ ಪಟ್ಟಣದ ನೋಡಲ್‌ ಅಧಿಕಾರಿಯೂ ಆಗಿರುವ ಸುಂದರಮ್‌ ಸುದ್ದಿಗಾರರಿಗೆ ತಿಳಿಸಿದರು.

‘ಕೆಂಪು ವಲಯ’ದಲ್ಲಿ ಜೇಪಿ ವಿದ್ಯುತ್‌ ಸ್ಥಾವರ

ಜೇಪಿ ವಿದ್ಯುತ್‌ ಸ್ಥಾವರದ ವಸತಿ ಸಂಕೀರ್ಣದಲ್ಲಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಬಿರುಕುಗಳು ಬುಧವಾರ ಕಾಣಿಸಿವೆ. ಅಲ್ಲದೇ ಬ್ಯಾಟ್ಮಿಂಟನ್‌ ಕೋರ್ಟ್‌ ಕೂಡ ಭಾರಿ ಬಿರುಕಿನಿಂದ ಇಬ್ಭಾಗವಾಗಿದೆ. ಸಂಕೀರ್ಣವನ್ನು ಅತೀ ಹೆಚ್ಚು ಅಪಾಯದ ‘ಕೆಂಪು ಪಟ್ಟಿ ವಲಯ’ವಾಗಿ ಘೋಷಿಸಲಾಗಿದೆ. ಸಂಕೀರ್ಣದ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ. ವಸತಿ ಸಂಕೀರ್ಣ ಯಾವುದೇ ಕ್ಷಣದಲ್ಲಿ ಧರಾಶಾಹಿಯಾಗುವ ಸೂಚನೆಗಳಿವೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಜೋಶಿಮಠದಲ್ಲಿ ವಾರ್ಷಿಕ 6.65 ಸೆ.ಮೀ ಭೂಕುಸಿತ

ಹಿಮಾಲಯ ಶ್ರೇಣಿಯ ಪಟ್ಟಣ ಜೋಶಿಮಠ ಎರಡು ವರ್ಷಗಳಿಂದ ವಾರ್ಷಿಕ 6.65 ಸೆ.ಮೀ ಪ್ರಮಾಣದಲ್ಲಿ ಕುಸಿಯುತ್ತಿರುವುದನ್ನು ಹೊಸ ಅಧ್ಯಯನ ತೆರೆದಿಟ್ಟಿದೆ.

2020 ಜುಲೈನಿಂದ 2022ರ ಮಾರ್ಚ್‌ ಅವಧಿಯ 18 ತಿಂಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಭೂಮಿ ಕುಸಿದಿರುವುದನ್ನು ಸಾಬೀತುಪಡಿಸುವ, ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

‘ಪರಿಷ್ಕೃತ ಪರಿಹಾರ ಒಪ್ಪಂದದ ನಂತರ ತೆರವು’

ಲಖನೌ: ಅಸುರಕ್ಷಿತವೆಂದು ಪರಿಗಣಿಸಿರುವ ಜೋಶಿಮಠದ ಎರಡು ಹೋಟೆಲ್‌ ಕಟ್ಟಡಗಳ ತೆರವು ಕಾರ್ಯವನ್ನು ನಿವಾಸಿಗಳೊಂದಿಗೆ ಪರಿಷ್ಕೃತ ಪರಿಹಾರ ಒಪ್ಪಂದ ಮಾಡಿಕೊಂಡು ಪುನಃ ಆರಂಭಿಸಲಾಗುವುದು ಎಂದು ಜಿಲ್ಲಾಮಟ್ಟದ ಹಿರಿಯ ಅಧಿಕಾರಿ ಬುಧವಾರ ತಿಳಿಸಿದರು.

ಚೀನಾ ಗಡಿಗೆ ಸಮೀಪವಿರುವ ಈ ಪಟ್ಟಣದಲ್ಲಿ ನೂರಕ್ಕೂ ಹೆಚ್ಚು ಪ್ರತಿಭಟನಕಾರರು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ, ವಾಲಿದ ಎರಡು ಹೋಟೆಲ್ ಕಟ್ಟಡಗಳ ತೆರವಿಗೆ ತಡೆಯೊಡ್ಡಿದ್ದರು. ಸ್ಥಳೀಯ ಆಡಳಿತವು ಮಧ್ಯಂತರ ಪರಿಹಾರ ಪ್ಯಾಕೇಜ್ ಅನ್ನು ಅನುಮೋದಿಸಿದೆ ಎಂದು ಜಿಲ್ಲಾಮಟ್ಟದ ಅಧಿಕಾರಿ ಹಿಮಾಂಶು ಖುರಾನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT