ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರದಲ್ಲಿ ಕೊಲಿಜಿಯಂ ನೀಡುವ ಶಿಫಾರಸುಗಳಲ್ಲಿ ಕೆಲವನ್ನು ಮಾತ್ರ ಒಪ್ಪಿಕೊಳ್ಳುವ ಕೇಂದ್ರ ಸರ್ಕಾರದ ಪ್ರವೃತ್ತಿಯು ಒಳ್ಳೆಯ ಸಂದೇಶವನ್ನು ರವಾನಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವರ್ಗಾವಣೆಗೆ ಸೂಚಿಸಿ ಕೊಲಿಜಿಯಂ 11 ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ ಈ ಪೈಕಿ ಐವರು ನ್ಯಾಯಮೂರ್ತಿಗಳನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ. ಇನ್ನುಳಿದ ಆರು ಮಂದಿಯ ಹೆಸರುಗಳು ಇನ್ನೂ ಬಾಕಿ ಉಳಿದಿವೆ ಎಂದು ಕೋರ್ಟ್ ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಕ್ಕೆ ಈಚೆಗೆ ಶಿಫಾರಸು ಮಾಡಲಾಗಿರುವ ಹೆಸರುಗಳ ಪೈಕಿ, ಎಂಟು ಹೆಸರುಗಳಿಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಇವರಲ್ಲಿ ಕೆಲವರು, ಈಗಲೇ ನೇಮಕ ಆದವರಿಗಿಂತ ಹಿರಿಯರೂ ಇದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಹೇಳಿದೆ.
‘ಐವರು ನ್ಯಾಯಮೂರ್ತಿಗಳಿಗೆ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ಆರು ಮಂದಿ ನ್ಯಾಯಮೂರ್ತಿಗಳಿಗೆ ಆದೇಶ ಆಗಿಲ್ಲ. ಇವರಲ್ಲಿ ನಾಲ್ಕು ಮಂದಿ ಗುಜರಾತ್‌ನವರು’ ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಸದಸ್ಯರೂ ಆಗಿರುವ ನ್ಯಾಯಮೂರ್ತಿ ಕೌಲ್ ಅವರು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಉದ್ದೇಶಿಸಿ ಹೇಳಿದರು.
ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳ ಪೈಕಿ ಕೆಲವನ್ನು ಮಾತ್ರ ಸರ್ಕಾರ ಒಪ್ಪಿಕೊಳ್ಳುತ್ತಿದೆ. ಸರ್ಕಾರ ಯಾವ ಸಂದೇಶ ರವಾನಿಸುತ್ತಿದೆ ಎಂದು ಪೀಠ ಕೇಳಿದೆ.
ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳ ವಿಚಾರವಾಗಿ ಕೇಂದ್ರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಕೆಲವರನ್ನು ಮಾತ್ರ ನೇಮಕ ಮಾಡಿದಾಗ, ಇತರರು ತಮ್ಮ ಸೇವಾ ಹಿರಿತನವನ್ನು ಕಳೆದುಕೊಳ್ಳುತ್ತಾರೆ. ಆಗ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಪೀಠ ಹೇಳಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.