ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರ ಮೀಸಲಾತಿಯಲ್ಲಿ ಕೆನೆಪದರ: ಖರ್ಗೆ ವಿರೋಧ

Published 10 ಆಗಸ್ಟ್ 2024, 15:25 IST
Last Updated 10 ಆಗಸ್ಟ್ 2024, 15:25 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿಗಳು (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಟಿ) ಕೆನೆಪದರದವರನ್ನು ಗುರುತಿಸಿ, ಅವರನ್ನು ಮೀಸಲಾತಿ ಕೋಟಾದಿಂದ ಹೊರಗಿರಿಸುವ ಆಲೋಚನೆಯು ಖಂಡನಾರ್ಹ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.

ಕೆನೆಪದರವನ್ನು ಗುರುತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದನ್ನು ಅನೂರ್ಜಿತಗೊಳಿಸುವ ಮಸೂದೆಯನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಬೇಕಿತ್ತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಕೂಡ ಆಗಿರುವ ಖರ್ಗೆ ಅವರು ಹೇಳಿದರು.

ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳಿಗೆ ನೀಡಿರುವ ಮೀಸಲಾತಿಯಲ್ಲಿ ಕೆನೆಪದರ ತತ್ವವನ್ನು ಜಾರಿಗೆ ತರುವುದಕ್ಕೆ ಸಂವಿಧಾನದ ಅಡಿಯಲ್ಲಿ ಅವಕಾಶ ಇಲ್ಲ ಎಂದು ಕೇಂದ್ರ ಸಚಿವ ಸಂಪುಟವು ಹೇಳಿದ ನಂತರದಲ್ಲಿ ಖರ್ಗೆ ಅವರು ಈ ಮಾತುಗಳನ್ನು ಆಡಿದ್ದಾರೆ.

‘ಕೆನೆಪದರ ತತ್ವವನ್ನು ಜಾರಿಗೆ ತರುವ ಮೂಲಕ ಯಾರಿಗೆ ಲಾಭ ಮಾಡಿಕೊಡುತ್ತೀರಿ? ಕೆನೆಪದರ ತತ್ವವನ್ನು ಅಳವಡಿಸಿ ನೀವು ಅಸ್ಪೃಶ್ಯರಿಗೆ ಸೌಲಭ್ಯ ನಿರಾಕರಿಸುತ್ತೀರಿ, ಸಹಸ್ರಾರು ವರ್ಷಗಳಿಂದ ಸವಲತ್ತುಗಳನ್ನು ಅನುಭವಿಸುತ್ತ ಬಂದವರಿಗೆ ಅದನ್ನು ಕೊಡುತ್ತೀರಿ. ಇದನ್ನು ನಾನು ಖಂಡಿಸುತ್ತೇನೆ... ಈ ದೇಶದಲ್ಲಿ ಅಸ್ಪೃಶ್ಯತೆಯ ಆಚರಣೆ ಇರುವವರೆಗೂ ಮೀಸಲಾತಿ ಇರಬೇಕು, ಇದಕ್ಕಾಗಿ ನಾವು ಹೋರಾಡುತ್ತೇವೆ’ ಎಂದು ಖರ್ಗೆ ಅವರು ಸುದ್ದಿಗಾರರ ಬಳಿ ಹೇಳಿದರು.

ಬಿಜೆಪಿಯು ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಸರ್ಕಾರಿ ವ್ಯವಸ್ಥೆಯಲ್ಲಿ ಇದ್ದ ಉದ್ಯೋಗಗಳನ್ನು ಮೋದಿ ನೇತೃತ್ವದ ಆಡಳಿತ ವ್ಯವಸ್ಥೆಯು ಖಾಸಗಿಯವರಿಗೆ ಒಪ್ಪಿದೆ, ಹಲವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ದೂರಿದರು.

‘ಎಸ್‌ಸಿಗಳು ಹಾಗೂ ಎಸ್‌ಟಿಗಳಿಗೆ ಉದ್ಯೋಗ ಪಡೆಯಲು ಆಗುತ್ತಿಲ್ಲ. ಉನ್ನತ ಸ್ಥಾನಗಳಲ್ಲಿ ಎಸ್‌ಸಿ ಸಮುದಾಯದವರು ಇಲ್ಲ. ಎಸ್‌ಸಿ ಹಾಗೂ ಎಸ್‌ಟಿಗಳನ್ನು ಕೆನೆಪದರದಲ್ಲಿ ವರ್ಗೀಕರಿಸಿ ಅವರು ಈ ಎರಡು ಸಮುದಾಯಗಳನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಕೋರ್ಟ್‌ ಆದೇಶ ನನಗೆ ಆಶ್ಚರ್ಯ ಮೂಡಿಸುವಂತಿದೆ. ದೊಡ್ಡ ಹುದ್ದೆಗಳಲ್ಲಿ ಇರುವ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರು ಅಲ್ಲಿಯೂ ತಾರತಮ್ಯ ಎದುರಿಸುತ್ತಿದ್ದಾರೆ. ಹಣ ಇದ್ದರೂ ಅವರಿಗೆ ತಾರತಮ್ಯ ಎದುರಾಗುತ್ತದೆ’ ಎಂದು ಖರ್ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT