ನವದೆಹಲಿ: ‘ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ತನ್ನ ಸ್ವಂತ ಬಲದಿಂದಲೇ ವಿಧಾನಸಭಾ ಚುನಾವಣೆ ಎದುರಿಸಲಿದೆ. ಆಮ್‌ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ’ ಎಂದು ಪಕ್ಷದ ಹಿರಿಯ ನಾಯಕಿ ಕುಮಾರಿ ಸೆಲ್ಜಾ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯ ಸಂಪಾದಕರ ಜೊತೆ ಶನಿವಾರ ಸಂವಾದ ನಡೆಸಿದ ಅವರು, 90 ಸದಸ್ಯ ಬಲವನ್ನು ಹೊಂದಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ‘ಜಯಭೇರಿ’ ಬಾರಿಸಲಿದೆ, ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯೇ ಇಲ್ಲ ಎಂದು ತಿಳಿಸಿದರು.
‘ತಳಮಟ್ಟದಲ್ಲಿ ಜನನಾಯಕ್ ಜನತಾ ಪಕ್ಷ( ಜೆಜೆಪಿ) ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಆ ಪಕ್ಷವು ಮತ ವಿಭಜಿಸುವ ಸಾಧ್ಯತೆಯಿಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಲವು ಮುಖಂಡರು ಜೆಜೆಪಿಗೆ ಹೋಗಿ ಗೆದ್ದಿದ್ದರು. ಆದರೆ, ಈಗಾಗಲೇ ಜೆಜೆಪಿ ವಿಭಜನೆಯಾಗಿದೆ. ಅಲ್ಲಿದ್ದ ಹಲವು ಶಾಸಕರು ಬೇರೆ ಕಡೆಗೆ ತೆರಳಿದ್ದಾರೆ. ಹೀಗಾಗಿ, ಜೆಜೆಪಿಯು ಈ ಸಲ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ’ ಎಂದರು.
‘ಐಎನ್‌ಎಲ್‌ಡಿ– ಬಿಎಸ್ಪಿ ಮೈತ್ರಿಕೂಟವು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಲು ಸಾಧ್ಯವಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಐಎನ್‌ಎಲ್‌ಡಿ ಹೀನಾಯವಾಗಿ ಸೋತಿದೆ. ಬಿಎಸ್ಪಿಯು ರಾಜ್ಯದಲ್ಲಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ. ಹೀಗಾಗಿ ಯಾವುದೇ ಪರಿಣಾಮ ಬೀರಲ್ಲ’ ಎಂದು ಸೆಲ್ಜಾ ತಿಳಿಸಿದರು.
ಹರಿಯಾಣದಲ್ಲಿ ಬಿಜೆಪಿ ಒಳಗಡೆ ಕಾಲೆಳೆಯುವ ಪ್ರವೃತ್ತಿಯಿದ್ದು ಸಾಕಷ್ಟು ಒತ್ತಡಗಳಿವೆ. ಜನರೊಂದಿಗಿನ ಸಂಪರ್ಕವನ್ನು ಪೂರ್ಣ ಕಡಿದುಕೊಂಡಿದ್ದು ಅದಕ್ಕೆ ತಕ್ಕ ಬೆಲೆ ತೆರಲಿದೆ.–ಕುಮಾರಿ ಸೆಲ್ಜಾ, ಕಾಂಗ್ರೆಸ್ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.