ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನನಷ್ಟ ಮೊಕದ್ದಮೆ| ಶಿಕ್ಷೆಗೆ ತಡೆ ಕೋರಿರುವ ರಾಹುಲ್ ಅರ್ಜಿಗೆ ಗುಜರಾತ್‌ ಸರ್ಕಾರ ವಿರೋಧ

Published 29 ಏಪ್ರಿಲ್ 2023, 14:18 IST
Last Updated 29 ಏಪ್ರಿಲ್ 2023, 14:18 IST
ಅಕ್ಷರ ಗಾತ್ರ

ಅಹಮದಾಬಾದ್: ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್‌ನ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಮರು‍ ಪರಿಶೀಲನಾ ಅರ್ಜಿಗೆ ಗುಜರಾತ್‌ ಸರ್ಕಾರ ಶನಿವಾರ ವಿರೋಧ ವ್ಯಕ್ತಪಡಿಸಿತು.

‘ಗಂಭೀರ ಅಪರಾಧ ಎಸಗಿದ್ದಕ್ಕಾಗಿ ರಾಹುಲ್‌ ಅವರಿಗೆ ಶಿಕ್ಷೆಯಾಗಿದೆ. ಹೀಗಾಗಿ ಅವರ ಮೇಲ್ಮನವಿಯನ್ನು ವಜಾಗೊಳಿಸಬೇಕು’ ಎಂದು ಸರ್ಕಾರಿ ವಕೀಲ ಮಿತೇಶ್‌ ಅಮಿನ್ ಅವರು ಗುಜರಾತ್‌ ಹೈಕೋರ್ಟ್‌ಗೆ ಮನವಿ ಮಾಡಿದರು.

ನ್ಯಾಯಮೂರ್ತಿ ಹೇಮಂತ್‌ ಪೃಚ್ಛಕ್ ಅರ್ಜಿ ವಿಚಾರಣೆ ನಡೆಸಿದರು.

ರಾಹುಲ್‌ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಗುಜರಾತ್‌ ಸರ್ಕಾರದ ನಿಲುವನ್ನು ವಿರೋಧಿಸಿದರು.

ಗಂಭೀರ ಅಪರಾಧಕ್ಕಾಗಿ ಚುನಾಯಿತ ಪ್ರತಿನಿಧಿಗಳಿಗೆ ವಿಧಿಸಿದ್ದ ಶಿಕ್ಷೆಗೆ ನ್ಯಾಯಾಲಯಗಳು ತಡೆ ನೀಡಿರುವ ಪ್ರಕರಣಗಳನ್ನು ಸಿಂಘ್ವಿ ಹೈಕೋರ್ಟ್‌ ಗಮನಕ್ಕೆ ತಂದರು. ‘ಇದು ಸಿವಿಲ್‌ ವ್ಯಾಜ್ಯದ ರೀತಿಯ ಪ್ರಕರಣ. ಹಾಗಾಗಿ, ಈ ಪ್ರಕರಣಕ್ಕೂ, ಗುಜರಾತ್‌ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ವಾದಿಸಿದರು.

‘ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣ ಗಂಭೀರ ಸ್ವರೂಪದ್ದಲ್ಲ ಹಾಗೂ ಯಾವುದೇ ದುಷ್ಟತನವನ್ನೂ ಒಳಗೊಂಡಿಲ್ಲ. ಹೀಗಾಗಿ, ಅವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದು ಮಾಡಬೇಕು’ ಎಂದು ಸಿಂಘ್ವಿ ಮನವಿ ಮಾಡಿದರು.

ಆಗ ವಾದ ಮುಂದುವರಿಸಿದ ಮಿತೇಶ್‌ ಅಮಿನ್, ‘ಸರ್ಕಾರಿ ವಕೀಲನಾಗಿ ನನಗೆ ಕೋರ್ಟ್‌ನಲ್ಲಿ ಮಾತನಾಡಲು ಶಾಸನಬದ್ಧ ಹಕ್ಕು ಇದೆ. ಇಂಥ ಪ್ರಕರಣಗಳಿಗೆ ಸಂಬಂಧಿಸಿ ಹಲವಾರು ತೀರ್ಪುಗಳಿವೆ. ಆದರೆ, ಅಂತಿಮವಾಗಿ ತೀರ್ಪು ನೀಡುವುದು ಕೋರ್ಟ್‌ನ ವಿವೇಚನೆಗೆ ಬಿಟ್ಟದ್ದು’ ಎಂದರು.

ಆಗ, ನ್ಯಾಯಮೂರ್ತಿ ಹೇಮಂತ್, ‘ಒಬ್ಬ ಚುನಾಯಿತ ಪ್ರತಿನಿಧಿಯಾಗಿ ರಾಹುಲ್‌ ಗಾಂಧಿ ಅವರು ಮಾತನಾಡುವಾಗ ಎಚ್ಚರದಿಂದ ಇರಬೇಕಿತ್ತು’ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡೂ ಕಡೆಯವರ ವಾದಗಳನ್ನು ಆಲಿಸಿದ ನಂತರ ಅವರು ವಿಚಾರಣೆಯನ್ನು ಮಂಗಳವಾರಕ್ಕೆ (ಮೇ 2) ಮುಂದೂಡಿದರು.

‘ದೂರು ಸಮರ್ಥನೀಯವಲ್ಲ’

ಹೈಕೋರ್ಟ್‌ನಲ್ಲಿ ಸುದೀರ್ಘ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ‘ರಾಹುಲ್‌ ಗಾಂಧಿ ವಿರುದ್ಧದ ದೂರು ಸಮರ್ಥನೀಯವಲ್ಲ. ಇಂತಹ ದೂರುಗಳನ್ನು ಪರಿಗಣಿಸುವುದು ಎಂದರೆ ಮಾನನಷ್ಟ ಕಾಯ್ದೆಯನ್ನು ಅಣಕಿಸಿದಂತೆ’ ಎಂದರು. ‘ರಾಹುಲ್‌ ಅವರಿಗೆ ನೀಡಿರುವ ಶಿಕ್ಷೆಯನ್ನು ಸಮರ್ಥಿಸಲು ಅವರು ಮಾಡಿರುವ ಭಾಷಣಕ್ಕೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಥವಾ ಸಾಕ್ಷ್ಯ ಅಧಿನಿಯಮದಡಿ ಯಾವುದೇ ಪುರಾವೆಗಳನ್ನು ಸಲ್ಲಿಸಲಾಗಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT