ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ: ಉನ್ನತಾಧಿಕಾರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ಸೌಹಾರ್ದಯುತ ಪರಿಹಾರಕ್ಕೆ ಒತ್ತು
Published 2 ಸೆಪ್ಟೆಂಬರ್ 2024, 12:29 IST
Last Updated 2 ಸೆಪ್ಟೆಂಬರ್ 2024, 12:29 IST
ಅಕ್ಷರ ಗಾತ್ರ

ಪಿಟಿಐ

ನವದೆಹಲಿ: ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನವಾಬ್‌ ಸಿಂಗ್‌ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ರಚಿಸಿದೆ.

ಸಮಿತಿಯು ನಿವೃತ್ತ ಐಪಿಎಸ್‌ ಅಧಿಕಾರಿ ಪಿ.ಎಸ್‌.ಸಂಧು, ದೇವೇಂದರ್‌ ಶರ್ಮಾ, ಪ್ರೊ. ರಂಜಿತ್‌ ಸಿಂಗ್‌ ಘುಮಾನ್‌, ಪಂಜಾಬ್‌ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರಜ್ಞ ಡಾ. ಸುಖಪಾಲ್‌ ಸಿಂಗ್ ಅವರನ್ನೂ ಒಳಗೊಂಡಿದೆ.

ಹರಿಯಾಣದ ಚೌಧರಿ ಚರಣ್‌ ಸಿಂಗ್‌ ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಆರ್‌.ಕಾಂಬೋಜ್‌ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಪರಿಗಣಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್‌ ತಿಳಿಸಿದೆ.

ವಾರದೊಳಗೆ ಸಭೆ:

ವಾರದೊಳಗೆ ಸಮಿತಿಯು ಮೊದಲ ಸಭೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಉಜ್ವಲ್‌ ಭುಯಾನ್‌ ಅವರ ಪೀಠ ಸೂಚಿಸಿತು. ಅಲ್ಲದೆ ಪಂಜಾಬ್‌ ಮತ್ತು ಹರಿಯಾಣ ನಡುವಿನ ಶಂಭು ಗಡಿಯಿಂದ ಟ್ರ್ಯಾಕ್ಟರ್‌, ಟ್ರಾಲಿ, ಇತ್ಯಾದಿ ವಾಹನಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚಿಸುವಂತೆ ಪೀಠವು ಸಮಿತಿಗೆ ತಿಳಿಸಿದೆ.

ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಸಮಿತಿಗೆ ಸಲಹೆಗಳನ್ನು ಮುಕ್ತವಾಗಿ ನೀಡಬಹುದು ಎಂದೂ ಪೀಠ ಹೇಳಿದೆ.

ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳುವಂತೆ ಪ್ರತಿಭಟನನಿರತ ರೈತರಿಗೆ ಎಚ್ಚರಿಕೆ ನೀಡಿದ ಪೀಠ, ಕಾರ್ಯಸಾಧುವಲ್ಲದ ಬೇಡಿಕೆಗಳಿಗೆ ಜೋತುಬೀಳಬಾರದು ಎಂದು ತಿಳಿಸಿದೆ.

ರಾಜಕೀಯಗೊಳಿಸಬಾರದು:

ರೈತರ ಪ್ರತಿಭಟನೆ ವಿಷಯವನ್ನು ರಾಜಕೀಯಗೊಳಿಸಬಾರದು ಮತ್ತು ಅವರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಗಣಿಸಬೇಕು ಎಂದು ಸಮಿತಿಗೆ ಸೂಚಿಸಿದೆ.

ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸ್ವಾತಂತ್ರ್ಯವನ್ನು ರೈತರು ಹೊಂದಿದ್ದಾರೆ ಎಂದು ಪೀಠ ಹೇಳಿದೆ.

ಅಂಬಾಲ ಬಳಿಯ ಶಂಭು ಗಡಿಯಲ್ಲಿ ಪ್ರತಿಭಟನ ನಿರತ ರೈತರು ಫೆಬ್ರುವರಿ 13ರಿಂದ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ವಾರದೊಳಗೆ ತೆಗೆದುಹಾಕುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಆ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT