ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಹಿಂಪಡೆದ ಶರದ್ ಪವಾರ್: ಎನ್‌ಸಿಪಿ ಅಧ್ಯಕ್ಷರಾಗಿ ಮುಂದುವರಿಯಲು ನಿರ್ಧಾರ

Published 5 ಮೇ 2023, 13:44 IST
Last Updated 5 ಮೇ 2023, 13:44 IST
ಅಕ್ಷರ ಗಾತ್ರ

ಮುಂಬೈ: ‘ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಸ್ಥಾನ ತೊರೆಯುವ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಶರದ್‌ ಪವಾರ್ ಅವರು ಶುಕ್ರವಾರ ಪ್ರಕಟಿಸುವ ಮೂಲಕ, ಪಕ್ಷದ ಕಾರ್ಯಕರ್ತರಲ್ಲಿ ಇದ್ದ ಆತಂಕವನ್ನು ದೂರ ಮಾಡಿದ್ದಾರೆ.

‘ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ರಾಜೀನಾಮೆ ನಿರ್ಧಾರ ಮರುಪರಿಶೀಲಿಸಬೇಕು ಎಂದು ಕೋರಿದ್ದರು. ಅವರ ಭಾವನೆಗಳಿಗೆ ಅಗೌರವ ತೋರಲು ನಾನು ಬಯಸುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ತೋರಿದ ಪ್ರೀತಿ, ನನ್ನ ಮೇಲಿಟ್ಟಿರುವ ವಿಶ್ವಾಸದಿಂದ ವಿನೀತನಾಗಿದ್ದೇನೆ. ಉತ್ತರಾಧಿಕಾರಿ ಆಯ್ಕೆಗೆ ರಚಿಸಿದ್ದ ಸಮಿತಿಯ ನಿರ್ಧಾರವನ್ನು ಗೌರವಿಸುತ್ತೇನೆ’ ಎಂದು ತಿಳಿಸಿದರು.

ಪಕ್ಷ, ಸಂಘಟನೆಯಲ್ಲಿ ಯಾವುದೇ ಸ್ಥಾನ ಅಥವಾ ಜವಾಬ್ದಾರಿಗೆ ಸಂಬಂಧಿಸಿದಂತೆ ಉತ್ತರಾಧಿಕಾರಿಯ ಚಿಂತನೆ ಇರಬೇಕು. ಹೊಸ ಜವಾಬ್ದಾರಿ ನೀಡುವ ಹಾಗೂ ಹೊಸ ನಾಯಕತ್ವ ರೂಪಿಸುವ ಕೆಲಸ ಆಗಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

ಪಕ್ಷದ ಅಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಆಯ್ಕೆಗೆ ಪವಾರ್‌ ಅವರೇ ರಚಿಸಿದ್ದ ಸಮಿತಿಯು ಶುಕ್ರವಾರ ಮಧ್ಯಾಹ್ನ ಸಭೆ ಸೇರಿ, ರಾಜೀನಾಮೆ ನೀಡುವ ಪವಾರ್‌ ಅವರ ನಿರ್ಧಾರವನ್ನು ತಿರಸ್ಕರಿಸಿತ್ತು. ಈ ನಿರ್ಧಾರವನ್ನು ಮುಖಂಡ ಪ್ರಫುಲ್‌ ಪಟೇಲ್‌, ಪವಾರ್ ಅವರ ಗಮನಕ್ಕೆ ತಂದಿದ್ದರು.

ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮೇ 2ರಂದು ಪ್ರಕಟಿಸಿದ್ದ ಶರದ್‌ ಪವಾರ್ ಅವರು, ಉತ್ತರಾಧಿಕಾರಿ ಆಯ್ಕೆಗೆ ಸಮಿತಿ ರಚಿಸಿದ್ದರು. ಈ ಸಮಿತಿಯಲ್ಲಿ ಅಜಿತ್ ಪವಾರ್, ಸುಪ್ರಿಯಾ ಸುಳೆ, ಪ್ರಫುಲ್‌ ಪಟೇಲ್ ಮತ್ತು ಛಗನ್‌ ಭುಜ್‌ಬಲ್ ಇದ್ದರು.

‘ರಾಷ್ಟ್ರಕ್ಕೆ ಪವಾರ್ ಅವರಂತಹ ನಾಯಕರ ಅಗತ್ಯವಿದೆ. ಅವರು ದೇಶದ ಗೌರವಾನ್ವಿತ ನಾಯಕರು. ಅವರ ನಿರ್ಧಾರಕ್ಕೆ ಕಾರ್ಯಕರ್ತರ ತೀವ್ರ ವಿರೋಧವಿದೆ. ಅವರ ಈ ಭಾವನೆಗಳನ್ನು ಕಡೆಗಣಿಸಲಾಗದು’ ಎಂದು ಪ್ರಫುಲ್‌ ಪಟೇಲ್‌ ಹೇಳಿದ್ದರು.

ಪಕ್ಷದ ಸಾಂಸ್ಥಿಕ ಘಟಕಗಳ ಬದಲಾವಣೆಗೆ ಒತ್ತು ನೀಡಲಿದ್ದು, ಹೊಸ ಜವಾಬ್ದಾರಿ ನೀಡುವ ಮೂಲಕ ಹೊಸ ನಾಯಕತ್ವ ಬೆಳೆಸುತ್ತೇನೆ. ಅಲ್ಲದೆ, ಪಕ್ಷದ ಗುರಿ ಮತ್ತು ಸಿದ್ದಾಂತಗಳ ಸಾಧನೆಗಳಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಹೇಳಿದರು.

ನನ್ನ ಆತ್ಮಚರಿತ್ರೆ ಬಿಡುಗಡೆಯ ಸಂದರ್ಭದಲ್ಲಿಯೇ ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. 63 ವರ್ಷಗಳ ಸಾರ್ವಜನಿಕ ಬದುಕಿನ ನಂತರ ನಾನು ಎಲ್ಲ ಜವಾಬ್ದಾರಿಗಳಿಂದ ಮುಕ್ತನಾಗಲು ಬಯಸಿದ್ದೆ. ಆದರೆ, ನನ್ನ ರಾಜೀನಾಮೆಯನ್ನು ಜನರು ಸಹಜವಾಗಿ ಸ್ವೀಕರಿಸಲಿಲ್ಲ. ಗಂಭೀರವಾಗಿ ಪ್ರತಿಕ್ರಿಯೆಗಳು ಬಂದವು. ಎನ್‌ಸಿಪಿ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸಮಾಧಾನ ನೀಡಲಿಲ್ಲ. ಮರುಪರಿಶೀಲಿಸಲು ಮನವಿ ಮಾಡಿದರು ಎಂದರು.

ಕಾರ್ಯಕರ್ತರ ಸಂಭ್ರಮ

ಪವಾರ್ ಅವರ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ, ಪಕ್ಷದ ಕಚೇರಿ ಎದುರು ಗುಂಪುಗೂಡಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಪವಾರ್ ಒಬ್ಬರೇ ನಾಯಕ’ ಎಂಬ ಘೋಷಣೆ ಕೂಗಿದರು.

ಸ್ಟಾಲಿನ್‌ ಮನವಿ

ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಶರದ್‌ ಪವಾರ್ ಅವರು ಮರುಪರಿಶೀಲಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರೂ ಮನವಿ ಮಾಡಿದ್ದರು.

ಸುದ್ದಿಗೋಷ್ಠಿಗೆ ಅಜಿತ್ ಪವಾರ್‌ ಗೈರು

ಶರದ್ ಪವಾರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಬೆಂಬಲಿಸಿದ್ದ ಅವರ ಸೋದರಳಿಯ, ಎನ್‌ಸಿಪಿ ಮುಖಂಡ ಅಜಿತ್ ಪವಾರ್‌ ಶುಕ್ರವಾರ ನಡೆದ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು.ಇದು, ಅಚ್ಚರಿ ಮೂಡಿಸಿತು.

ಅಜಿತ್ ಪವಾರ್ ಅವರ ಗೈರುಹಾಜರಿ ಕುರಿತ ಪ್ರಶ್ನೆಗೆ ಶರದ್ ಪವಾರ್ ಅವರು, ‘ಎಲ್ಲರೂ ಎಲ್ಲ ಕಡೆಯೂ ಇರಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು. ಅವರ ಗೈರು ಹಾಜರಿ ಕುರಿತಂತೆ ಹೆಚ್ಚಿನ ಕುತೂಹಲ ಬೇಡ ಎಂದೂ ಮಾಧ್ಯಮಗಳಿಗೆ ಕೋರಿದರು.

‘ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ನಾನು ಅಜಿತ್ ಪವಾರ್ ಅವರಿಗೆ ಈ ಹಿಂದೆಯೇ ಸುಳಿವು ನೀಡಿದ್ದೆ. ಆದರೆ, ಇಲ್ಲಿ ಕುಳಿತಿರುವ ಯಾರಿಗೂ ಆ ಬಗ್ಗೆ ತಿಳಿಸಿರಲಿಲ್ಲ‘ ಎಂದು ತಿಳಿಸಿದರು.

ಎನ್‌ಸಿಪಿ ಕಾರ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಬೇಕು ಎಂದು ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರಿಗೆ ಪಕ್ಷದ ಮುಖಂಡರು ಸಲಹೆ ಮಾಡಿದರು. ಆದರೆ, ಸುಪ್ರಿಯಾ ಈ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಪವಾರ್ ಇದೇ ಸಂದರ್ಭದಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT