ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News |ಈ ದಿನದ ಪ್ರಮುಖ 10 ಸುದ್ದಿಗಳು: ಮೇ 18, 2023

Published 18 ಮೇ 2023, 12:50 IST
Last Updated 18 ಮೇ 2023, 12:50 IST
ಅಕ್ಷರ ಗಾತ್ರ
Introduction

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್‌ ಅವರನ್ನು ಘೋಷಿಸಿದ ಕಾಂಗ್ರೆಸ್‌ ಹೈಕಮಾಂಡ್‌, ವಿಮಾನ ಪತನವಾಗಿ 17 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಪತ್ತೆ ಸೇರಿದಂತೆ ಈ ದಿನ ಗಮನ ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ

1

ಸಿದ್ದರಾಮಯ್ಯ ಸಿಎಂ, ಡಿಕೆಶಿ ಏಕೈಕ ಡಿಸಿಎಂ: ಕಾಂಗ್ರೆಸ್‌ನಿಂದ ಅಧಿಕೃತ ಘೋಷಣೆ

ನವದೆಹಲಿ: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿಯೂ, ಡಿ.ಕೆ ಶಿವಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಯೂ ಆಯ್ಕೆ ಮಾಡಿರುವುದಾಗಿ ಕಾಂಗ್ರೆಸ್‌ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದರು.

ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್‌ ಏಕೈಕ ಡಿಸಿಎಂ ಆಗಿರಲಿದ್ದಾರೆ. ಜತೆಗೆ 2024 ಲೋಕಸಭೆ ಚುನಾವಣೆ ವರೆಗೆ ಅವರೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದೂ ವೇಣುಗೋಪಾಲ್‌ ಹೇಳಿದರು.

ಈ ಸುದ್ದಿಯನ್ನು ಪೂರ್ತಿ ಓದಿ

2

ರಾಜ್ಯಪಾಲರಿಗೆ ಸಿದ್ದರಾಮಯ್ಯ ದೂರವಾಣಿ ಕರೆ: ಸಂಜೆ ಸರ್ಕಾರ ರಚನೆಗೆ ಹಕ್ಕು ಮಂಡನೆ

ಬೆಂಗಳೂರು: ಮುಖ್ಯಮಂತ್ರಿಯಾಗಿ ಘೋಷಣೆಯಾದ ಬಳಿಕ ಸಿದ್ದರಾಮಯ್ಯ ಅವರು, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.


ಈ ಸುದ್ದಿಯನ್ನು ಪೂರ್ತಿ ಓದಿ

3

ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿವೆ: ಸಿದ್ದರಾಮಯ್ಯ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನಿಂದ ಅಧಿಕೃತ ಘೋಷಣೆಯಾಗುತ್ತಲೇ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ‘ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿವೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನೂ, ಉಪ ಮುಖ್ಯಮಂತ್ರಿಯನ್ನಾಗಿ ಡಿ.ಕೆ ಶಿವಕುಮಾರ್‌ ಅವರನ್ನು ನೇಮಕ ಮಾಡಿರುವುದಾಗಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಗುರುವಾರ ಘೋಷಣೆ ಮಾಡಿದರು.

ಈ ಸುದ್ದಿಯನ್ನು ಪೂರ್ತಿ ಓದಿ

4

ನಾನ್ಯಾಕೆ ಬೇಸರಪಟ್ಟುಕೊಳ್ಳಲಿ, ಹಾದಿ ಇನ್ನೂ ದೀರ್ಘವಾಗಿದೆ: ಡಿ.ಕೆ ಶಿವಕುಮಾರ್‌

ನವದೆಹಲಿ: ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್‌ ಹೇಳಿದರು.

ಇಲ್ಲಿ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ನಾವಿಬ್ಬರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಎಲ್ಲವೂ ಸರಿಯಾಗಿದೆ. ಎಲ್ಲವೂ ಸರಿಯಾಗಿಯೇ ಇರುತ್ತದೆ‘ ಎಂದು ಡಿ.ಕೆ ಶಿವಕುಮಾರ್ ನುಡಿದರು.

ಈ ಸುದ್ದಿಯನ್ನು ಪೂರ್ತಿ ಓದಿ

5

ಬೇಸರವಿದೆ.. ಭವಿಷ್ಯದಲ್ಲಿ ನೋಡೋಣ: ಡಿ.ಕೆ ಸುರೇಶ್‌

ನವದೆಹಲಿ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿಯೂ, ಡಿ.ಕೆ ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರದಿಂದ ಬೇಸರವಾಗಿದೆ ಎಂದು ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಅವರು ಮಾತನಾಡಿದರು.

‘ನಾನು ಸಂಪೂರ್ಣವಾಗಿ ಸಂತುಷ್ಟನಾಗಿಲ್ಲ. ಆದರೆ ಕರ್ನಾಟಕದ ಜನರ ಹಿತಾಸಕ್ತಿಗಾಗಿ, ನಾವು ನಮ್ಮ ಬದ್ಧತೆಯನ್ನು ಪೂರೈಸುವುದಕ್ಕಾಗಿ, ಡಿ.ಕೆ ಶಿವಕುಮಾರ್‌ ಅವರು ಹೈಕಮಾಂ‌ಡ್ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಭವಿಷ್ಯದಲ್ಲಿ ನೋಡೋಣ. ಹಾದಿ ಇನ್ನೂ ದೀರ್ಘವಾಗಿದೆ‘ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ

6

ಡಿಸಿಎಂ ಸ್ಥಾನ ಕೇಳುವುದು ಏನಿದೆ. ನನಗೆ ಕೊಡಲೇಬೇಕು– ಜಿ. ಪರಮೇಶ್ವರ

ಬೆಂಗಳೂರು: ‘ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು’ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಶಾಸಕ ಜಿ. ಪರಮೇಶ್ವರ ಬೇಡಿಕೆ ಇಟ್ಟಿದ್ದಾರೆ.


ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಗುರುವಾರ ಬೆಳಿಗ್ಗೆ ಮಾತನಾಡಿದ ಅವರು, ‘ಅಧಿಕೃತವಾಗಿ ಡಿಸಿಎಂ ಸ್ಥಾನ ಬರಬೇಕಿದೆ. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಉಪ ಮುಖ್ಯಮಂತ್ರಿ ಆಗಿರಬೇಕು ಎಂದು ಹೇಳಲು ಬರುವುದಿಲ್ಲ‘ ಎಂದರು.


ಈ ಸುದ್ದಿಯನ್ನು ಪೂರ್ತಿ ಓದಿ

7

‘ಕೇರಳ ಸ್ಟೋರಿ’ ಪ್ರದರ್ಶನ ನಿಷೇಧ: ಪಶ್ಚಿಮ ಬಂಗಾಳದ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ: ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿ ಮೇ8ರಂದು ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.

ನಿಷೇಧಕ್ಕೆ ನೀಡಿರುವ ಕಾರಣಗಳು ಸೂಕ್ತವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ದೇಶದ ಎಲ್ಲ ಕಡೆ ಚಿತ್ರ ಪ್ರದರ್ಶನ ಕಾಣುತ್ತಿದೆ. ಸಂಪೂರ್ಣ ರಾಜ್ಯದಲ್ಲಿ ನೀವು ನಿಷೇಧ ಹೇರಲು ಬರುವುದಿಲ್ಲ. ಸಾರ್ವಜನಿಕ ಪ್ರದರ್ಶನದ ಮೂಲಭೂತ ಹಕ್ಕಿಗೆ ಧಕ್ಕೆ ತರುವಂತಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪರದಿವಾಲಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

8

ಜ್ಞಾನವಾಪಿ| ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು

ನವದೆಹಲಿ: ವಾರಾಣಸಿಯ ಜ್ಞಾನವಾ‍ಪಿ ಮಸೀದಿ ಸಂಕೀರ್ಣದಲ್ಲಿ ದೊರೆತಿದೆ ಎಂದು ಹೇಳಲಾಗಿರುವ ಶಿವಲಿಂಗವನ್ನು ಕಾರ್ಬನ್‌ ಡೇಟಿಂಗ್‌ ಪರೀಕ್ಷೆಗೆ ಒಳಪಡಿಸಲು ಹಾಗೂ ಈ ಕುರಿತು ವೈಜ್ಞಾನಿಕ ಸರ್ವೆ ನಡೆಸಲು ಅನುಮತಿ ನೀಡಿರುವ ಅಲಹಾಬಾದ್‌ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಗುರುವಾರ ಒಪ್ಪಿಗೆ ಸೂಚಿಸಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

9

ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ತಮಿಳುನಾಡು ಮಾಡಿರುವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದಿದೆ. ಈ ಮೂಲಕ ಜನಪ್ರಿಯ ಕ್ರೀಡೆ ‘ಜಲ್ಲಿಕಟ್ಟು’ಗೆ ಅನುಮತಿ ನೀಡಿದೆ. ಇದರ ಜೊತೆಗೆ ಮಹಾರಾಷ್ಟ್ರದ ಎತ್ತಿನ ಗಾಡಿ ಓಟವನ್ನೂ ನ್ಯಾಯಾಲಯ ಸಮ್ಮತಿಸಿದೆ.

ಈ ಸುದ್ದಿಯನ್ನು ಪೂರ್ತಿ ಓದಿ

10

ವಿಮಾನ ಪತನವಾಗಿ 17 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ 4 ಮಕ್ಕಳು ಪತ್ತೆ!

ಕೊಲಂಬಿಯಾ: ವಿಮಾನ ಪತನಗೊಂಡ 17 ದಿನಗಳ ನಂತರ ಕೊಲಂಬಿಯಾದ ಅಮೆಜಾನ್‌ ದಟ್ಟಾರಣ್ಯದಲ್ಲಿ ಹನ್ನೊಂದು ತಿಂಗಳ ಮಗು ಸೇರಿ ನಾಲ್ಕು ಮಕ್ಕಳು ಪತ್ತೆಯಾಗಿದ್ದು, ಈ ಬಗ್ಗೆ ಕೊಲಂಬಿಯಾ ಅಧ್ಯಕ್ಷರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.


‘ಕಠಿಣ ಶೋಧ ಕಾರ್ಯಾಚರಣೆಯ ನಂತರ ನಮ್ಮ ಸೇನೆ ಮಕ್ಕಳನ್ನು ಪತ್ತೆ ಮಾಡಿದೆ. ಗುವಿಯಾರ್‌ನಲ್ಲಿ ವಿಮಾನ ಅಪಘಾತದಲ್ಲಿ ಕಣ್ಮರೆಯಾಗಿದ್ದ 4 ಮಕ್ಕಳನ್ನು ನಾವು ಜೀವಂತವಾಗಿ ಪತ್ತೆ ಮಾಡಿದ್ದೇವೆ. ಇದು ನಾಡಿಗೆ ಸಂತಸದ ಸುದ್ದಿಯಾಗಿದೆ‘ ಎಂದು ಟ್ವಿಟರ್‌ನಲ್ಲಿ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಪೂರ್ತಿ ಓದಿ