ಉತ್ತರಕಾಶಿ (ಉತ್ತರಾಖಂಡ): ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಅದರೊಳಗೆ ಸಿಲುಕಿರುವ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಆದರೆ ಅವರನ್ನು ರಕ್ಷಿಸಲು ಇನ್ನೂ ಎರಡು ದಿನ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಲ್ಕ್ಯಾರಾ ಹಾಗೂ ದಂಡಲಗಾಂವ್ ನಡುವಣ ಸಂಪರ್ಕ ಕಲ್ಪಿಸುವ ಸುರಂಗವನ್ನು ಗಂಗೋತ್ರಿ–ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ಕೆಲಭಾಗ ಭಾನುವಾರ ಕುಸಿದಿದೆ.
ಸುರಂಗದೊಳಗೆ ಸಿಲುಕಿರುವ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಸಂವಹನ ಸಾಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದಾರೆ
ಭಾನುವಾರ ಕಾರ್ಯಾಚರಣೆ ಪ್ರಾರಂಭಿಸಿದ ತಕ್ಷಣವೇ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಆರಂಭಿಸಲಾಯಿತು. ಕಾರ್ಮಿಕರೊಂದಿಗೆ ಸಂವಹನ ಸಾಧಿಸಿದ ಬಳಿಕ ಕುಡಿಯುವ ನೀರು ಹಾಗೂ ಲಘು ಆಹಾರ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಲುಕಿರುವ ಕಾರ್ಮಿಕರನ್ನು ಮಂಗಳವಾರ ರಾತ್ರಿ ಇಲ್ಲವೇ ಬುಧವಾರದೊಳಗೆ ರಕ್ಷಿಸಲಾಗುವುದು ಎಂದು ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಸುರಂಗದ ಒಳಗೆ ಮಣ್ಣು ಕುಸಿದು ಬೀಳದಂತೆ ಕಾಂಕ್ರೀಟ್ ಸಿಂಪಡಿಸಲಾಗುತ್ತಿದೆ. ಭಾರಿ ಗಾತ್ರದ ಉಕ್ಕಿನ ಪೈಪ್ ಅನ್ನು ಕಾರ್ಮಿಕರು ಇರುವತ್ತ ತಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.