ಹೈದರಾಬಾದ್: ‘ಒಂದು ದೇಶ, ಒಂದು ಚುನಾವಣೆ ಎಂಬುದು ಎನ್‌ಡಿಎ ನೇತೃತ್ವದ ಸರ್ಕಾರದ ಕೀಳುಮಟ್ಟದ ತಂತ್ರ. ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ’ ಎಂದು ತೆಲಂಗಾಣ ಸಚಿವರೂ ಆಗಿರುವ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆಯೂ ಇಂತಹ ತಂತ್ರಗಳನ್ನು ನಾವು ನೋಡಿದ್ದೇವೆ. ಈ ಹಿಂದಿನ 9 ವರ್ಷಗಳ ಅವಧಿಯಲ್ಲಿ ಇಂತಹ ವ್ಯವಸ್ಥೆಯನ್ನು ಎನ್‌ಡಿಎ ಯಾಕೆ ಜಾರಿಗೊಳಿಸಲಿಲ್ಲ? ಈಗಲೂ ಕೂಡ ಅಂಥ ವ್ಯವಸ್ಥೆಯನ್ನು ಅವರು ಜಾರಿಗೊಳಿಸುತ್ತಾರೆ ಎಂಬ ಖಾತರಿ ಏನು’ ಎಂದು ಪ್ರಶ್ನಿಸಿದರು.
‘ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯನ್ನು ಜಾರಿಗೊಳಿಸಲು ಬಿಜೆಪಿ ಬಯಸಿದ್ದರೆ, ಅವರನ್ನು ತಡೆಯುವವರು ಯಾರು? ಅವರಿಗೆ ಸಂಸತ್‌ನಲ್ಲಿ ಭಾರಿ ಬಹುಮತ ಇದೆ’ ಎಂದೂ ಹೇಳಿದರು.
‘ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಪಕ್ಷವು 2018ರಲ್ಲಿ ಬೆಂಬಲ ಸೂಚಿಸಿ, ಪತ್ರ ಬರೆದಿತ್ತು. ಆಗ, ಅದು ಜಾರಿಯಾಗಲಿಲ್ಲ. ಈಗ ಮತ್ತೆ ಈ ಕುರಿತು ಸಂಸತ್‌ನಲ್ಲಿ ಪ್ರಸ್ತಾವ ಮಂಡನೆಯಾದಲ್ಲಿ ನಮ್ಮ ನಿಲುವಿನ ಬಗ್ಗೆ ಚಿಂತನೆ ನಡೆಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.