ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟ| ಪರಿಸರ ಸೂಕ್ಷ್ಮ ಪ್ರದೇಶ ಪ್ರಶ್ನಿಸಿದ್ದ ಪಿಐಎಲ್ ವಜಾ

Last Updated 18 ಸೆಪ್ಟೆಂಬರ್ 2022, 11:18 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಘಟ್ಟದ 55 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕರಡು ಅಧಿಸೂಚನೆ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

‘3–10–2018ರಂದು ಹೊರಡಿಸಲಾಗಿರುವ ಕರಡು ಅಧಿಸೂಚನೆಯು ಸಂವಿಧಾನದ 12ನೇ ಪರಿಚ್ಛೇದದಡಿ ರೈತರಿಗೆ ನೀಡಲಾಗಿರುವ ಜೀವನ ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸಲಿದೆ’ ಎಂದು ಕೇರಳದ ಕರ್ಶಕ ಶಬ್ದಂ (ರೈತರ ಧ್ವನಿ) ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಅರ್ಜಿಯಲ್ಲಿ ದೂರಿತ್ತು.

‘ಕರಡು ಅಧಿಸೂಚನೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಇಷ್ಟೊಂದು ತಡ ಮಾಡಿದ್ದು ಏಕೆ’ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಅರ್ಜಿದಾರರನ್ನು ಪ್ರಶ್ನಿಸಿತು.

‘ಸಂಬಂಧಪಟ್ಟವರನ್ನೆಲ್ಲಾ ಸಂಪರ್ಕಿಸಿ ಮಾಹಿತಿ ಪಡೆಯಬೇಕಿತ್ತು. ಈ ಪ್ರಕ್ರಿಯೆಗೆ ಸುದೀರ್ಘ ಸಮಯ ಬೇಕಾಯಿತು’ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು.

‘ಕರಡು ಅಧಿಸೂಚನೆಯನ್ನು 2018ರಲ್ಲಿ ಹೊರಡಿಸಲಾಗಿದೆ. ನೀವು ನಾಲ್ಕು ವರ್ಷಗಳ ಬಳಿಕ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೀರಿ.ತಮ್ಮ ಉದ್ದೇಶ ತಿಳಿಸುವುದು ಹಾಗೂ ಜನಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸುವುದಷ್ಟೇ ಕರಡು ಅಧಿಸೂಚನೆಯ ಉದ್ದೇಶ. ನೀವು ಬೇಕಿದ್ದರೆ ಇತ್ತೀಚಿನ ಕರಡು ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿ. ತಡವಾಗಿ ಸಲ್ಲಿಸಲಾಗಿರುವ ಇಂತಹ ಅರ್ಜಿಗಳನ್ನು ನಾವು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT