ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲಾ ನ್ಯಾಯಾಧೀಶರ ಪಿಂಚಣಿ ಕುಂದುಕೊರತೆ; ಸೂಕ್ತ ಪರಿಹಾರಕ್ಕೆ ಕೇಂದ್ರಕ್ಕೆ ಸೂಚನೆ

Published 8 ಆಗಸ್ಟ್ 2024, 16:31 IST
Last Updated 8 ಆಗಸ್ಟ್ 2024, 16:31 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತರಾದವರಿಗೆ ನೀಡುತ್ತಿರುವ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದಷ್ಟು ಶೀಘ್ರ ಬಗೆಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

‘ಜಿಲ್ಲಾ ನ್ಯಾಯಾಲಯದ ಪಾಲಕರಾಗಿ, (ಅಟಾರ್ನಿ ಜನರಲ್‌, ಸಾಲಿಸಿಟರ್‌ ಜನರಲ್‌)ಗಳು ಅಮಿಕಸ್‌ ಕ್ಯೂರಿ ಜೊತೆ ಕೂತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ತಿಳಿಸಿತು. 

‘ದಾಖಲಾದ ಪ್ರಕರಣಗಳಲ್ಲಿ ಕೆಲವು ಅತ್ಯಂತ ಕಠಿಣ’ ಎಂದು ಬಣ್ಣಿಸಿದ ಸಿಜೆಐ, ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ನ್ಯಾಯಾಧೀಶರ ಪ್ರಕರಣವನ್ನು ಉಲ್ಲೇಖಿಸಿದರು. ಪಿಂಚಣಿ ಹೆಚ್ಚಳದ ಕುಂದುಕೊರತೆಗಳ ಕುರಿತು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ದಾಖಲಿಸಿದ್ದಾರೆ’ ಎಂದು ಈ ವೇಳೆ ಪ್ರಸ್ತಾಪಿಸಿದರು.

ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತರಾದವರು ಮಾಸಿಕ ₹15 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ. 56–57ನೇ ವಯಸ್ಸಿಗೆ ಹೈಕೋರ್ಟ್‌ಗೆ ಬಡ್ತಿ ಪಡೆದು, ಸೇವಾವಧಿ ಮುಗಿದು ನಿವೃತ್ತಿ ಪಡೆದರೆ ₹30 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಶ್‌ ಮಿಶ್ರಾ ಅವರು ತಿಳಿಸಿದರು.

‘ಹೈಕೋರ್ಟ್‌ನ ಕೆಲವು ನ್ಯಾಯಾಮೂರ್ತಿ‌ಗಳಿಗಷ್ಟೇ ಮಧ್ಯಸ್ಥಿಕೆ ವಹಿಸಲು ಅವಕಾಶ ಸಿಗುತ್ತದೆ. 60 ವಯಸ್ಸಿನಲ್ಲಿ ವಕೀಲಿಕೆ ನಡೆಸಲು ಹೋಗುವುದಿಲ್ಲ’ ಎಂದು ಸಿಜೆಐ ತಿಳಿಸಿದರು.

ಕೇಂದ್ರ ಸರ್ಕಾರದ ಪ‍ರ‌ವಾಗಿ ‌ಹಾಜರಾದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಜಿಲ್ಲಾ ನ್ಯಾಯಾಧೀಶರ ಪಿಂಚಣಿಯ ವಾದ ಮಂಡಿಸಲು ಹೆಚ್ಚಿನ ಕಾಲಾವಕಾಶ ಕೋರಿದರು.

ನಿವೃತ್ತ ನ್ಯಾಯಾಧೀಶರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಕೋರಿ ಅಖಿಲ ಭಾರ‌ತೀಯ ನ್ಯಾಯಾಧೀಶರ ಒಕ್ಕೂಟವು ಅರ್ಜಿ ಸಲ್ಲಿಸಿತ್ತು. ಮುಂದಿನ ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT