ನವದೆಹಲಿ: ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮದ ವ್ಯಕ್ತಿ ಇತರ ಧರ್ಮಗಳಿಗೆ ಮತಾಂತರಗೊಂಡಲ್ಲಿ ಆತ/ಆಕೆ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುವರು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಇತರ ಧರ್ಮಗಳಲ್ಲಿ ಶ್ರದ್ಧೆ–ನಂಬಿಕೆ ಹೊಂದಿರುವುದಾಗಿ ಘೋಷಿಸಿಕೊಳ್ಳುವ ವ್ಯಕ್ತಿಯು ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದವರು ಎಂದು ಪರಿಭಾವಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

ಪರಿಶಿಷ್ಟ ಪಂಗಡದವರ (ಎಸ್ಟಿ) ಮತಾಂತರಕ್ಕೆ ಸಂಬಂಧಪಟ್ಟಂತೆ ಈ ಆದೇಶವು ಅನ್ವಯಿಸದು. ಏಕೆಂದರೆ, ಎಸ್ಟಿ ಸ್ಥಾನಮಾನವು ಧರ್ಮ ಆಧಾರಿತವಾಗಿಲ್ಲ. ಈ ಪಂಗಡಕ್ಕೆ ಸೇರಿದವರು ಅನುಸರಿಸುವ ಸಂಪ್ರದಾಯ, ಜೀವನ ಪದ್ಧತಿ, ಸಂಬಂಧಿಸಿದ ಬುಡಕಟ್ಟು ಗುಂಪು ಈ ಸಮುದಾಯವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಎಸ್ಟಿ ಸ್ಥಾನಮಾನ ನಿರ್ಧಾರವಾಗುತ್ತದೆ ಎಂದೂ ಸ್ಪಷ್ಟಪಡಿಸಿದೆ.

‘ಪರಿಶಿಷ್ಟ ಜಾತಿಗೆ (ಎಸ್ಸಿ) ಸೇರಿದ ವ್ಯಕ್ತಿಯು ಇತರ ಧರ್ಮಕ್ಕೆ ಮತಾಂತರಗೊಂಡಾಗ ಆ ಕ್ಷಣವೇ ಹಾಗೂ ಸಂಪೂರ್ಣವಾಗಿ ಆತ/ಆಕೆ ಎಸ್ಸಿ ಸ್ಥಾನಮಾನವನ್ನು ಕಳೆದುಕೊಳ್ಳುವರು’ ಎಂಬ ಆಂಧ್ರ ಪ್ರದೇಶ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.

‘ಯಾವುದೇ ವ್ಯಕ್ತಿಯು ಕ್ರೈಸ್ತ ಧರ್ಮ ಸ್ವೀಕರಿಸಿ, ಆ ಧರ್ಮದಲ್ಲಿ ಶ್ರದ್ಧೆ ಹೊಂದಿದ್ದಾಗಿ ಘೋಷಿಸಿ ಹಾಗೂ ಅದನ್ನು ಪಾಲನೆ ಮಾಡುವುದನ್ನು ಆರಂಭಿಸಿದ ಬಳಿಕ ಆ ವ್ಯಕ್ತಿಯು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬುದಾಗಿ ಪರಿಗಣಿಸಲಾಗದು’ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಕಳೆದ ವರ್ಷ ಏಪ್ರಿಲ್ 30ರಂದು ಆದೇಶಿಸಿತ್ತು.

‘ಜಾತಿ ವ್ಯವಸ್ಥೆ ಕ್ರೈಸ್ತ ಧರ್ಮಕ್ಕೆ ವಿರುದ್ಧವಾದುದು. ಹೀಗಾಗಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ‘ಎಸ್ಸಿ, ಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ’ಯ ಅವಕಾಶಗಳಡಿ ಪರಿಹಾರ ಕೇಳುವುದನ್ನು ನಿರ್ಬಂಧಿಸಲಾಗಿದೆ’ ಎಂದು ಹೈಕೋರ್ಟ್ ಹೇಳಿತ್ತು.

ಈ ಆದೇಶ ಪ್ರಶ್ನಿಸಿ, ಪಾದ್ರಿ ಚಿಂತಾಡ ಆನಂದ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ ಕುಮಾರ್ ಮಿಶ್ರಾ, ಎನ್.ವಿ.ಅಂಜಾರಿಯಾ ಹಾಗೂ ಮನಮೋಹನ್ ಅವರು ಇದ್ದ ಪೀಠ ನಡೆಸಿತು.

ಚಿಂತಾಡ ಆನಂದ ಅವರ ಮೇಲ್ಮನವಿಯನ್ನು ವಜಾಗೊಳಿಸುವ ಜೊತೆಗೆ, ಎಸ್ಸಿ, ಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಅವಕಾಶಗಳಡಿ ವ್ಯಕ್ತಿಯೊಬ್ಬರ ವಿರುದ್ಧ ಹೊರಿಸಿದ್ದ ಆರೋಪಗಳನ್ನು ನ್ಯಾಯಪೀಠ ರದ್ದು ಮಾಡಿದೆ.

ಈ ಪ್ರಕರಣದಲ್ಲಿ, ಮೇಲ್ಮನವಿದಾರ ಕ್ರೈಸ್ತ ಧರ್ಮದಿಂದ ಪುನಃ ತನ್ನ ಮೂಲ ಧರ್ಮಕ್ಕೆ ಮತಾಂತರಗೊಂಡಿಲ್ಲ ಅಥವಾ ಆತ ಸಮುದಾಯಕ್ಕೆ ಮರಳಿರುವುದಾಗಿ ಮಾದಿಗ ಸಮುದಾಯ ಒಪ್ಪಿಕೊಂಡಿಲ್ಲ ಎಂಬುದನ್ನು ಪೀಠ ಗಮನಿಸಿದೆ.

ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ಶ್ರದ್ಧೆ–ನಂಬಿಕೆ ಹೊಂದಿದ್ದು, ಅದನ್ನು ಪಾಲನೆ ಮಾಡುತ್ತಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಪಿಟ್ಟಲವಾನಿಪಾಲೆಂನಲ್ಲಿ ಪಾದ್ರಿಗಳ ಫೆಲೋಶಿಪ್ನ ಖಜಾಂಚಿಯೂ ಆಗಿದ್ದಾರೆ. ಗ್ರಾಮದ ಮನೆಗಳಲ್ಲಿ ಪ್ರತಿ ಭಾನುವಾರ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಅವರ ಈ ಉದ್ಯೋಗ ಹಾಗೂ ವರ್ತನೆಯು ಮೇಲ್ಮನವಿದಾರ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಹೊಂದಿರುವುದನ್ನು ಸಾರ್ವಜನಿಕವಾಗಿ ಘೋಷಿಸಿದಂತೆಯೆ ಆಗಿದೆ ಎಂದೂ ಪೀಠ ಹೇಳಿದೆ.

ಪೀಠ ಹೇಳಿದ್ದು

* 1950ರ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಆದೇಶದ ನಿಬಂಧನೆ 3ರಡಿ ನಿರ್ದಿಷ್ಟವಾಗಿ ಉಲ್ಲೇಖ ಮಾಡಿರದ ಯಾವುದೇ ಧರ್ಮಕ್ಕೆ ಮತಾಂತರಗೊಂಡಲ್ಲಿ ವ್ಯಕ್ತಿಯು ಎಸ್ಸಿ ಸ್ಥಾನಮಾನವನ್ನು ಆ ಕ್ಷಣವೇ ಕಳೆದುಕೊಳ್ಳುತ್ತಾರೆ

* ಧರ್ಮದ ವಿಚಾರವಾಗಿ 1950ರ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಆದೇಶದ ನಿಬಂಧನೆ 3ರಡಿ ಹೇರಲಾಗಿರುವ ನಿಷೇಧ/ನಿರ್ಬಂಧವು ನಿಸ್ಸಂದಿಗ್ಧವಾಗಿ ಸ್ಪಷ್ಟ ಹಾಗೂ ಪರಿಪೂರ್ಣವಾಗಿದೆ

* ಒಬ್ಬ ವ್ಯಕ್ತಿಯು 1950ರ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಆದೇಶದ ನಿಬಂಧನೆ 3ರಡಿ ಉಲ್ಲೇಖಿಸಲಾದ ಧರ್ಮದ ಬದಲಾಗಿ ಬೇರೆ ಧರ್ಮದಲ್ಲಿ ಶ್ರದ್ಧೆ–ನಂಬಿಕೆ ಹೊಂದಿದ್ದಲ್ಲಿ ತಾನು ಪಾಲಿಸುವ ಧರ್ಮಕ್ಕೆ ಸೇರಿರುವ ಜೊತೆಗೆ ಎಸ್ಸಿ ಸಮುದಾಯಕ್ಕೂ ತಾನು ಸೇರಿದ್ದಾಗಿ ಹೇಳಿಕೊಳ್ಳಲು ಅವಕಾಶ ಇಲ್ಲ

* ವೈಯಕ್ತಿಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ಬೇರೊಂದು ಧರ್ಮವನ್ನು ಪಾಲನೆ ಮಾಡುವ ವ್ಯಕ್ತಿಯು ಶಾಸನಬದ್ಧ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ತಾನು ಪರಿಶಿಷ್ಟ ಜಾತಿಗೂ ಸೇರಿದ್ದಾಗಿ ಹೇಳಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ಹೇಳುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು

* ಈ ಪ್ರಕರಣದಲ್ಲಿ ಮೇಲ್ಮನವಿದಾರ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದಾರೆ. 1950ರ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಆದೇಶದ ನಿಬಂಧನೆ 3ರಡಿ ಕ್ರೈಸ್ತ ಧರ್ಮವನ್ನು ಉಲ್ಲೇಖಿಸಿಲ್ಲ. ಹೀಗಾಗಿ ಅವರ ಮೂಲ ಜಾತಿ ಮಾದಿಗ ಆಗಿದ್ದರೂ ಈಗ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಪರಿಭಾವಿಸಲು ಸಾಧ್ಯ ಇಲ್ಲ

- ಪ್ರಕರಣವೇನು?

ಪರಿಶಿಷ್ಟ ಜಾತಿಗೆ ಸೇರಿದ ಚಿಂತಾಡ ಆನಂದ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕ ಆಂಧ್ರ ಪ್ರದೇಶದ ಹಳ್ಳಿಯೊಂದರಲ್ಲಿ ಪಾದ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಗ್ರಾಮದಲ್ಲಿ ಭಾನುವಾರ ಪ್ರಾರ್ಥನಾ ಸಭೆ ನಡೆಸುತ್ತಿದ್ದ ವೇಳೆ ಅಕ್ಕಲ ರಾಮಿ ರೆಡ್ಡಿ ನನ್ನ ಮೇಲೆ ಹಲ್ಲೆ ನಡೆಸಿದ್ದರು.

ನನ್ನನ್ನು ಜಾತಿಯಿಂದ ಕರೆದು ನಿಂದಿಸಿದ್ದರು. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದರು’ ಎಂದು ಚಿಂತಾಡ ಆನಂದ ಅವರು 2021ರಲ್ಲಿ ರಾಮಿ ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಐಪಿಸಿ ಹಾಗೂ ಎಸ್ಸಿಎಸ್ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ದೂರು ನೀಡಿದ್ದ ಅವರು ಅಕ್ಕಲ ರಾಮಿ ರೆಡ್ಡಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದರು.

‘ಎಸ್ಟಿ ಸ್ಥಾನಮಾನ: ಮತಾಂತರವನ್ನಷ್ಟೆ ಪರಿಗಣಿಸಿ ನಿರ್ಧಾರ ಸಲ್ಲ’

1950ರ ಸಾಂವಿಧಾನಿಕ(ಪರಿಶಿಷ್ಟ ಪಂಗಡ) ಆದೇಶದ ಅನ್ವಯ ಒಬ್ಬ ವ್ಯಕ್ತಿ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆಯೂ ನ್ಯಾಯಪೀಠ ವಿವರಿಸಿದೆ.

‘ಒಂದು ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯು ಮತಾಂತರಗೊಂಡ ಬಳಿಕ ಅಥವಾ ದೀರ್ಘ ಕಾಲ ತನ್ನ ಬುಡಕಟ್ಟು ಸಂಪ್ರದಾಯಗಳನ್ನು ಪರಿತ್ಯಾಗ ಮಾಡಿದ್ದಲ್ಲಿ ಆತ/ಆಕೆಯ ಬುಡಕಟ್ಟು ಅಸ್ಮಿತೆ ಬಗ್ಗೆ ಸಂದೇಹ ಮೂಡಿದಲ್ಲಿ ಆ ವಿಷಯ ಕುರಿತು ವಿಚಾರಣೆ ವೇಳೆ ನಿರ್ಧರಿಸಬೇಕು’ ಎಂದು ಪೀಠ ಹೇಳಿದೆ.

‘ಒಂದು ವೇಳೆ ವ್ಯಕ್ತಿಯು ತನ್ನ ಬುಡಕಟ್ಟು ಸಮುದಾಯದ ಸಂಪ್ರದಾಯಗಳನ್ನು ವಿಧಿಗಳನ್ನು ಸಂಪೂರ್ಣವಾಗಿ ಪರಿತ್ಯಾಗ ಮಾಡಿದ್ದಲ್ಲಿ ಹಾಗೂ ಮತಾಂತರವಾಗಿರುವ ಧರ್ಮವನ್ನು ಸಂಪೂರ್ಣವಾಗಿ ಪಾಲನೆ ಮಾಡುತ್ತಿದ್ದಲ್ಲಿ ಅಂಥ ವ್ಯಕ್ತಿಯು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬುದಾಗಿ ಪರಿಗಣಿಸಬಾರದು’ ಎಂದೂ ಹೇಳಿದೆ. ವ್ಯಕ್ತಿಯ ಪರಿಶಿಷ್ಟ ಪಂಗಡ(ಎಸ್ಟಿ) ಸ್ಥಾನಮಾನವನ್ನು ಮತಾಂತರವನ್ನಷ್ಟೆ ಪರಿಗಣಿಸಿ ನಿರ್ಧರಿಸಲು ಸಾಧ್ಯ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.