ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕೇರಳದಲ್ಲಿ ಅಧಿಕಾರ ಕಳೆದುಕೊಳ್ಳುವ ಮೂಲಕ, 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶ 'ಎಡರಂಗ ಮುಕ್ತ'ವಾಯಿತು. ಕಮ್ಯುನಿಸ್ಟ್ ಸಿದ್ಧಾಂತಗಳ ಸೋಲು, ವೈಫಲ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ, ತಮಿಳುನಾಡಿನ ಪುಟ್ಟ ಹಳ್ಳಿಯೊಂದು ಕಣ ಕಣದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ಉಸಿರಾಡುತ್ತಿದೆ.

ಹೌದು, ಇದು ತಮಿಳುನಾಡಿನ ಮಧುರೈ ಜಿಲ್ಲೆಯ ವನ್ನಿವೇಲಂಪಟ್ಟಿ ಎಂಬ ಪುಟ್ಟದೊಂದು ಊರು. ಈ ಊರಿನ ಹೆಜ್ಜೆ ಹೆಜ್ಜೆಗೂ ನಿಮಗೆ ಕಾರ್ಲ್ ಮಾರ್ಕ್ಸ್, ಲೆನಿನ್, ಫಿಡೆಲ್ ಕ್ಯಾಸ್ಟ್ರೋ, ಜೋಸೆಫ್ ಸ್ಟಾಲಿನ್ ಸಿಗುತ್ತಾರೆ. ಇಲ್ಲಿ ಅವರು ಯಾರೂ ಕ್ರಾಂತಿಕಾರಿ ನಾಯಕರಲ್ಲ. ಹಳ್ಳಿಯ ಕೂಲಿ ಕಾರ್ಮಿಕರೋ, ರೈತರೋ ಆಗಿದ್ದಾರೆ ಎನ್ನುವುದು ವಿಶೇಷ.

'ಕೀಳ್ವೆಣ್ಮಣಿ ಹತ್ಯಾಕಾಂಡ'ದ ಬಗ್ಗೆ ಕೇಳಿರಬಹುದು. 1968ರಲ್ಲಿ ಇಲ್ಲಿನ ನಾಗಪಟ್ಟಣಂ ಜಿಲ್ಲೆಯ ಕೀಳ್ವೆಣ್ಮಣಿ ಎಂಬ ಗ್ರಾಮದಲ್ಲಿ 44 ದಲಿತ ಕೂಲಿ ಕಾರ್ಮಿಕರನ್ನು ಭೂಮಾಲೀಕರು ಜೀವಂತವಾಗಿ ಸುಟ್ಟ ಭೀಕರ ಘಟನೆಯದು. ಈ ಮಹಾಕ್ರೌರ್ಯ ವನ್ನಿವೇಲಂಪಟ್ಟಿ ಹಾಗೂ ಕೀಳ್ವೆಣ್ಮಣಿ ಜನರ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಅದರ ಫಲದಿಂದಲೇ ಇಂದಿಗೂ ಅಲ್ಲಿನ ಜನ ಸಮಾನತೆಗಾಗಿ, ತಮ್ಮ ಹಕ್ಕಿಗಾಗಿ ಸದಾ ಹೊರಾಟಕ್ಕೆ ಸಿದ್ಧರಾಗಿ ನಿಲ್ಲುವುದು.

ಘಟನೆಯ ನಂತರ ಇಲ್ಲಿ ಕಮ್ಯುನಿಸ್ಟ್ ಸಿದ್ಧಾಂತ ಬಲಗೊಂಡಿತು. ವೇಂಬುಲಿ ಎಂಬ ಕೂಲಿ ಕಾರ್ಮಿಕ ತನ್ನ ಊರವರನ್ನು ಸೇರಿಸಿಕೊಂಡು ಸಂಘಟನೆ ಕಟ್ಟಿದರು. ಜನ ತಮ್ಮ ಮಕ್ಕಳಿಗೆ ಪ್ರಸಿದ್ಧ ಕಮ್ಯುನಿಸ್ಟ್ ನಾಯಕರ ಹೆಸರುಗಳನ್ನು ಇಡಲಾರಂಭಿಸಿದರು. ಇದು ಪರಂಪರೆಯಾಗಿ ಇಂದಿಗೂ ಮುಂದುವರಿದಿದೆ.

ವನ್ನಿವೇಲಂಪಟ್ಟಿಯ ಮೂಲೆ ಮೂಲೆಗೂ ಕಮ್ಯುನಿಸ್ಟ್ ನಾಯಕರ ಚಿತ್ರ, ಪಕ್ಷದ ಚಿಹ್ನೆಗಳೇ ಕಾಣಿಸುತ್ತವೆ. ಪ್ರತಿ ಕಟ್ಟಡದ ಮೇಲೂ ಕೆಂಪುಧ್ವಜ. ಇಡೀ ಊರೆ ಕಮ್ಯುನಿಸ್ಟರ ಕೆಂಪುಕೋಟೆಯಂತೆ ರಾರಾಜಿಸುತ್ತದೆ. ಯುವಕರು 'ಚೆ ಗೆವಾರ', 'ಕಾರ್ಲ್ ಮಾರ್ಕ್ಸ್' ಚಿತ್ರಗಳ ಟಿ-ಶರ್ಟ್ ಧರಿಸುವುದು ಇಲ್ಲಿ ಸಾಮಾನ್ಯ.

ಇಲ್ಲಿನ ಸಣ್ಣಪುಟ್ಟ ಚಹಾದಂಗಡಿಗೆ ಹೋದರೂ ಅಲ್ಲಿ ರೈತರ ಹೋರಾಟದ, ಕಾರ್ಮಿಕರ ಹಕ್ಕುಗಳ, ರಾಜಕೀಯ ಸಿದ್ಧಾಂತಗಳ ಕುರಿತ ಚರ್ಚೆಗಳೇ ಕಿವಿಗೆ ಬೀಳುತ್ತವೆ.

ಈ ಹಳ್ಳಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಯೂ ಹಣ ಹಂಚುವ ಧೈರ್ಯ ಮಾಡುವುದಿಲ್ಲ. 'ನಮಗೆ ಬೇಕಿರುವುದು ನಿಮ್ಮ ಹಣವಲ್ಲ, ನಮ್ಮ ಹಣದಲ್ಲಿ ನಿರ್ಮಿಸಬೇಕಾದ ರಸ್ತೆ, ಶಾಲೆ, ಮೂಲಸೌಕರ್ಯಗಳಷ್ಟೆ' ಎಂಬುದು ಇಲ್ಲಿನವರ ಆದರ್ಶ ತತ್ವ.

ಕಮ್ಯುನಿಸ್ಟ್ ಸಿದ್ಧಾಂತ ಅಧಿಕಾರದಲ್ಲಿಲ್ಲ ಎನ್ನುವುದೇನೋ ನಿಜ. ಆದರೆ ಸಿದ್ಧಾಂತವೇ ಜೀವನಶೈಲಿಯಾಗಿ ಇಡೀ ಊರೇ ಸಮಾನತೆ, ಸಂವಿಧಾನ, ಮಾನವ ಹಕ್ಕುಗಳ ಅರಿವಿನ ತೋಟವೆನಿಸಿದಾಗ ಕಮ್ಯುನಿಸ್ಟ್ ತತ್ವಕ್ಕೆ ಅರ್ಥ ತುಂಬುತ್ತದೆ. ಅಧಿಕಾರವೆಂಬುದು ಅರ್ಥ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ವನ್ನಿವೇಲಂಪಟ್ಟಿ ಜೀವಂತ ಸಾಕ್ಷಿ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.