ಬೆಂಗಳೂರು: ಆಗಾಗ ತಮ್ಮ ವಿವಾದಿತ ಹೇಳಿಕೆ, ನಡೆಗಳಿಂದಲೇ ಹೆಚ್ಚು ಸುದ್ದಿಗೆ ಗ್ರಾಸವಾಗುವ ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ ತಿದ್ದುಪಡಿ ಮಸೂದೆ ಕುರಿತು ನಿನ್ನೆ ಲೋಕಸಭೆಯಲ್ಲಿ ಚರ್ಚೆ ವೇಳೆ ಎಂದಿನಂತೆ ತೇಜಸ್ವಿ ಸೂರ್ಯ ತಮ್ಮ ಭಾಷಣವನ್ನು ಕಾಂಗ್ರೆಸ್ ಕಡೆ ತಿರುಗಿಸಿದರು.

ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆಯಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ ಎಂದು ಕೆಲವರು ಪುಕಾರು ಎಬ್ಬಿಸುತ್ತಿದ್ದಾರೆ. ಆದರೆ, ಅಸಲಿಗೆ ಇದಕ್ಕಿಂತ ದೊಡ್ಡ ಕೊಡುಗೆ ದಕ್ಷಿಣ ಭಾರತಕ್ಕೆ ಸಿಗುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಸೂರ್ಯ ಅವರು, ‘ಪುಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತಿದೆ. ಏಕೆಂದರೆ, ಈ ವಿಚಾರದಲ್ಲಿ ಕಾಂಗ್ರೆಸ್ನ ಟ್ರ್ಯಾಕ್ ರೆಕಾರ್ಡ್ ಹೇಗಿದೆಯಂದರೆ, ಬ್ರೀಟಿಷರು 1947ರಲ್ಲಿ ಭಾರತ ಪಾಕಿಸ್ತಾನವನ್ನು ವಿಭಜನೆ ಮಾಡಿದ ರೀತಿಗಿಂತಲೂ ಆಂಧ್ರ–ತೆಲಂಗಾಣವನ್ನು ಕಾಂಗ್ರೆಸ್ ವಿಭಜಿಸಿತು‘ ಎಂದು ಕಾಂಗ್ರೆಸ್ ಅನ್ನು ಛೇಡಿಸಿದರು.

ಇದರಿಂದ ತೀವ್ರ ಆಕ್ರೋಶಗೊಂಡ ತೆಲಂಗಾಣದ ಬಿಜೆಪಿಯೇತರ ಸಂಸದರು ‘ತೇಜಸ್ವಿ ಸೂರ್ಯ ತೆಲಂಗಾಣ ರಾಜ್ಯ ರಚನೆಯಾಗಿದ್ದನ್ನು ನೇರವಾಗಿ ಭಾರತ–ಪಾಕ್ ವಿಭಜನೆಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಅವರ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಬೇಕೆಂದು ಹಠ ಹಿಡಿದಿದ್ದಾರೆ.

ಇಲ್ಲಿಂದ ಕಿಡಿ ಹೊತ್ತಿದ್ದು, ಇದೀಗ ತೆಲಂಗಾಣದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.

ತೆಲಂಗಾಣದ ಮಾಜಿ ಸಚಿವ ಹಾಗೂ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಸೂರ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣ ರಾಜ್ಯದ ಪ್ರಜಾಸತ್ತಾತ್ಮಕ ಹೋರಾಟವನ್ನು ದೇಶ ವಿಭಜನೆಯಂತಹ ದುರಂತಮಯ ಘಟನೆಯೊಂದಿಗೆ ಹೋಲಿಸುವುದು ಸಂಪೂರ್ಣ ಅಜ್ಞಾನ ಮತ್ತು ಅಹಂಕಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮರಾವ್ ಅವರು, ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ. ನಮ್ಮ ತೆಲಂಗಾಣ ರಾಜ್ಯ ದಾನವಾಗಿ ಸಿಕ್ಕದ್ದಲ್ಲ, ದಶಕಗಳ ಹೋರಾಟ ಮತ್ತು ಸಾವಿರಾರು ಯುವಕರ ತ್ಯಾಗದ ಫಲವಾಗಿ ರೂಪುಗೊಂಡ ರಾಜ್ಯ ಎಂದು ತಿರುಗೇಟು ನೀಡಿದ್ದಾರೆ.

ತೆಲಂಗಾಣದ ರಾಜಕೀಯ ನಾಯಕಿ, ಮಾಜಿ ಸಂಸದೆ ಕೆ. ಕವಿತಾ ತೇಜಸ್ವಿ ಸೂರ್ಯ ವಿರುದ್ಧ ಕಿಡಿ ಕಾರಿದ್ದು, ಸೂರ್ಯ ಅವರೇ ನಿಮಗೆಷ್ಟು ಧೈರ್ಯ? ಆರು ದಶಕಗಳ ಕಾಲ ತೆಲಂಗಾಣಕ್ಕಾಗಿ ಹೋರಾಡಿದವರನ್ನಷ್ಟೇ ಅಲ್ಲ, ತಮ್ಮ ಪ್ರಾಣ ತ್ಯಾಗ ಮಾಡಿದ ಸಾವಿರಾರು ಜನರನ್ನೂ ಅವಮಾನಿಸುತ್ತಿದ್ದೀರಿ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಆರ್ಎಸ್ ಪಕ್ಷ ಟ್ವೀಟ್ ಮಾಡಿ ಸಂಸತ್ತಿನಲ್ಲಿ ಇಂತಹ ಹೇಳಿಕೆಗಳು ಬಂದಾಗಲೂ ರಾಜ್ಯದ ಆಯ್ಕೆಯಾದ ಎಲ್ಲ ಸಂಸದರು ಮೌನವಾಗಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇನ್ನು ಹಲವರು ಸಾಮಾಜಿಕ ತಾಣಗಳಲ್ಲಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ತೆಲಂಗಾಣಕ್ಕೆ ಬನ್ನಿ ನಿಮಗೆ ಚಪ್ಪಲಿ ಸೇವೆ ಕಾಯ್ದಿದೆ ಎಂದಿದ್ದಾರೆ. ಅಲ್ಲದೇ ಇಂದು ತೆಲಂಗಾಣದ ಹಲವೆಡೆ ಸೂರ್ಯ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಮಾತು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಕ್ಸ್ನಲ್ಲಿ ಸುದೀರ್ಘ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ ಅವರು, ನಾನು ತೆಲಂಗಾಣ ಜನರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ಬದಲಿಗೆ ತೆಲಂಗಾಣ ರಾಜ್ಯ ರಚನೆ ಹೋರಾಟವನ್ನು ಕಾಂಗ್ರೆಸ್ ಹೇಗೆ ಕೆಟ್ಟದಾಗಿ ನಿಭಾಯಿಸಿತು ಎಂಬುದನ್ನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್, ಮುಸ್ಲಿಂ ಬಗ್ಗೆ ಹಲವು ವಿವಾದಿತ ಹೇಳಿಕೆಗಳಲ್ಲದೇ ವಿಮಾನವೊಂದರ ಪ್ರಯಾಣದ ವೇಳೆ ತುರ್ತು ನಿರ್ಗಮನ ದ್ವಾರ ತೆಗೆಯಲು ಯತ್ನಿಸಿದ್ದರು ಎನ್ನುವ ಆರೋಪವ ಸೂರ್ಯ ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.