ಹೈದರಾಬಾದ್: ‘ಆಂಧ್ರದ ಪಕ್ಷ’ ಎಂಬ ಹಣೆಪಟ್ಟಿ ಹೊತ್ತಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಪಾಲಿಗೆ ತೆಲಂಗಾಣದಲ್ಲಿ ಅಂತ್ಯ ಎದುರಾಗಿರುವಂತಿದೆ. ತೆಲಂಗಾಣ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಿಂದ ದೂರ ಉಳಿಯಲು ಟಿಡಿಪಿ ನಿರ್ಧರಿಸಿದೆ. ಹೀಗಾಗಿ, ತೆಲಂಗಾಣದಲ್ಲಿ ಬಾಗಿಲು ಬಂದ್ ಮಾಡಿರುವ ‘ಆಂಧ್ರದ ಪಕ್ಷಗಳ’ ಸಾಲಿಗೆ ಟಿಡಿಪಿ ಕೂಡ ಸೇರಿದೆ.
ಟಿಡಿಪಿ ಜನ್ಮತಾಳಿದ್ದು 1980ರ ದಶಕದಲ್ಲಿ, ಅವಿಭಜಿತ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಲ್ಲಿ. ತೆಲಂಗಾಣದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟಿಡಿಪಿ ಹೇಳಿಲ್ಲ. ಆದರೆ ಮಹತ್ವದ ಈ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ತೀರ್ಮಾನವು ಪಕ್ಷದ ಪಾಲಿಗೆ ವಿನಾಶವನ್ನಲ್ಲದೆ ಮತ್ತೇನನ್ನೂ ತರುವಂತೆ ಕಾಣುತ್ತಿಲ್ಲ.
ಖ್ಯಾತ ನಟ ಎನ್.ಟಿ. ರಾಮರಾವ್ ಅವರು 1982ರ ಮಾರ್ಚ್ 29ರಂದು ಈ ಪಕ್ಷಕ್ಕೆ ಚಾಲನೆ ನೀಡಿದ್ದರು. ‘ತೆಲುಗರ ಆತ್ಮಗೌರವ’ ಮತ್ತು ‘ತೆಲುಗಿನ ಹೆಮ್ಮೆ’ ಎಂಬುದು ಈ ಪಕ್ಷದ ನೆಲೆಗಟ್ಟಾಗಿತ್ತು. 2014ರಲ್ಲಿ ರಾಜ್ಯದ ವಿಭಜನೆ ಆದ ನಂತರದಲ್ಲಿ, ತೆಲುಗು ಭಾಷಿಕ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪಕ್ಷವನ್ನು ಸಕ್ರಿಯವಾಗಿ ಇರಿಸುವ ಯತ್ನವನ್ನು ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಅವರು ನಡೆಸಿದ್ದರು. ಆದರೆ ಅವರ ಪ್ರಮುಖ ಗಮನ ಇದ್ದಿದ್ದು ಆಂಧ್ರಪ್ರದೇಶದ ಕಡೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆಗ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿತ್ತು, ಶೇಕಡ 3.5ರಷ್ಟು ಮತಗಳನ್ನು ಪಡೆದುಕೊಂಡಿತ್ತು.
ರಾಜ್ಯದ ವಿಭಜನೆಯ ನಂತರದಲ್ಲಿ, ತೆಲಂಗಾಣದಲ್ಲಿ ಪಕ್ಷದ ಚಟುವಟಿಕೆ ಕೊನೆಗೊಳಿಸಿ, ಆಂಧ್ರಪ್ರದೇಶದ ಮೇಲೆ ಮಾತ್ರ ಗಮನಹರಿಸಲು ವೈಎಸ್‌ಆರ್‌ಸಿಪಿ ತೀರ್ಮಾನಿಸಿತು. ವಿಭಜನೆಯ ಹತ್ತು ವರ್ಷಗಳ ನಂತರವೂ ಟಿಡಿಪಿಗೆ ತೆಲಂಗಾಣದ ಕೆಲವು ಕಡೆಗಳಲ್ಲಿ ಸಕ್ರಿಯ ಕಾರ್ಯಕರ್ತರು ಇದ್ದಾರೆ. ಹೀಗಿದ್ದರೂ ಅದು ಚುನಾವಣೆಯಲ್ಲಿ ಸ್ಪರ್ಧಿಸದಿರುವ ತೀರ್ಮಾನ ಕೈಗೊಂಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸದಿರುವ ತೀರ್ಮಾನಕ್ಕೆ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ತೆಲಂಗಾಣ ಘಟಕದ ಅಧ್ಯಕ್ಷರಾಗಿದ್ದ ಕಸಾನಿ ಜ್ಞಾನೇಶ್ವರ್ ಅವರು ಪಕ್ಷ ತೊರೆದಿದ್ದಾರೆ. ‘ನಾನು ನಾಯ್ಡು ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾಗ, ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ ಎಂಬ ತೀರ್ಮಾನ ತಿಳಿಸಿದರು. ಅದನ್ನು ಕೇಳಿ ಆಘಾತವಾಗಿತ್ತು. ನಾಯ್ಡು ಅವರ ಸಂದೇಶವನ್ನು ಕಾರ್ಯಕರ್ತರಿಗೆ ತಿಳಿಸಿದೆ. ಅವರೂ ಬೇಸರ ವ್ಯಕ್ತಪಡಿಸಿದರು. ನಾನು ನನ್ನ ರಾಜೀನಾಮೆ ಪತ್ರವನ್ನು ಪಕ್ಷದ ನಾಯಕರಿಗೆ ಕಳುಹಿಸಿದೆ. ಆದರೆ ಅದಕ್ಕೆ ಅವರು ಪ್ರತಿಕ್ರಿಯೆಯನ್ನೂ ನೀಡಿಲ್ಲ. ತೆಲಂಗಾಣದಲ್ಲಿ ಪಕ್ಷದ ವಿಚಾರವಾಗಿ ಅವರು ಗಂಭೀರವಾಗಿ ಇಲ್ಲ ಅನಿಸುತ್ತದೆ’ ಎಂದು ಜ್ಞಾನೇಶ್ವರ್ ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ತೀರ್ಮಾನವು ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ಇದು ಪಕ್ಷದ ಕಾರ್ಯಕರ್ತರು, ನಾಯಕರ ಸ್ಥೈರ್ಯ ಕುಗ್ಗಿಸುತ್ತದೆ.ತೆಲಕಪಳ್ಳಿ ರವಿ, ರಾಜಕೀಯ ವಿಶ್ಲೇಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.