ಲಖನೌ: ನರ್ಸ್ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಸಂಬಂಧ ಖಾಸಗಿ ಆಸ್ಪತ್ರೆಯ ವೈದ್ಯ ಸೇರಿದಂತೆ ಮೂವರನ್ನು ಮೊರದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಎಎನ್‌ಐ ಟ್ವೀಟ್ ಮಾಡಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಗೆ ಬೀಗ ಜಡಿಯಲಾಗಿದೆ ಎಂದು ಹೇಳಿದೆ.
'ತಮ್ಮ ಮಗಳ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವೈದ್ಯರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಠಾಕೂರ್‌ದ್ವಾರ ಪೊಲೀಸ್ ಠಾಣೆಗೆ ಆಗಸ್ಟ್ 18ರಂದು ದೂರು ನೀಡಿದ್ದರು' ಎಂದು ಮೊರದಾಬಾದ್ ಗ್ರಾಮಾಂತರ ಎಸ್‌ಪಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.
'ದೂರಿನ ಆಧಾರದಲ್ಲಿ ಆಸ್ಪತ್ರೆಯ ವೈದ್ಯ ಶಹನವಾಜ್, ಜುನೈದ್ ಮತ್ತು ಮೆಹನವಾಜ್ (ಮಹಿಳೆ) ಎಂಬವರನ್ನು ಆರೋಪಿಗಳು ಎಂದು ಗುರುತಿಸಲಾಗಿತ್ತು. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಮೂವರನ್ನೂ ಬಂಧಿಸಲಾಗಿದೆ. ಆಸ್ಪತ್ರೆಯನ್ನು ಮುಚ್ಚಿಸಲಾಗಿದೆ' ಎಂದು ವಿವರಿಸಿದ್ದಾರೆ.
ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ದೇಶದಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿರುವ ಸಂದರ್ಭದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೊರದಾಬಾದ್ ಜಿಲ್ಲೆಯ 16 ವರ್ಷದ ಬಾಲಕಿ ಮೇಲೆ ಉತ್ತರಾಖಂಡದ ಡೆಹರಾಡೂನ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಸಹ ಭಾನುವಾರವಷ್ಟೇ ವರದಿಯಾಗಿತ್ತು.