ವಿದ್ಯುತ್ ಉತ್ಪಾದನೆ ಕುಸಿತ: ಇಂಧನ ಇಲಾಖೆಯ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪ್ರಶ್ನೆ, ಲೋಕಸಭೆ ಚುನಾವಣೆ: ನಡ್ಡಾ, ಶಾ ಭೇಟಿಯಾದ ಎಚ್‌ಡಿಕೆ, ಸೀಟು ಹಂಚಿಕೆ ಬಗ್ಗೆ ಚರ್ಚೆ, ಅರುಣಾಚಲಪ್ರದೇಶದ ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾ: ಠಾಕೂರ್ ಪ್ರವಾಸ ರದ್ದು ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
ರಾಜ್ಯದ ವಿದ್ಯುತ್ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿತ ಆಗಿರುವುದು ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಇಂಧನ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 32,009 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯವಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಉತ್ಪಾದನೆ ಕುಸಿತವಾಗಿರುವುದಕ್ಕೆ ಕಾರಣ ಕೇಳಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದ ಅರುಣಾಚಲ ಪ್ರದೇಶದ ವುಶು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿರಾಕರಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಏಷ್ಯನ್ ಗೇಮ್ಸ್ ಸಮಾರಂಭದಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಬೇಕಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
‘ಸನಾತನ ಧರ್ಮ’ ಕುರಿತು ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರ ಮತ್ತು ಉದಯನಿಧಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ಮಂಡ್ಯ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಡೆಯಲು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ನಿಯೋಜನೆ ಸೇರಿ, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಅಹಮದಾಬಾದ್‌ನ ಮೆಟ್ರೊಪಾಲಿಟನ್ ನ್ಯಾಯಾಲಯವು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಶುಕ್ರವಾರ ಎರಡನೇ ಸಮನ್ಸ್ ಜಾರಿ ಮಾಡಿದೆ.
ಸ್ಫೂರ್ತಿಯುತ ಪ್ರದರ್ಶನ ಮುಂದುವರಿಸಿದ ಭಾರತ ವಾಲಿಬಾಲ್ ಪುರುಷರ ತಂಡ ಶುಕ್ರವಾರ 3–0 ಯಿಂದ ಚೀನಾ ತೈಪೆ ತಂಡವನ್ನು ಸೋಲಿಸಿ ಏಷ್ಯನ್ ಗೇಮ್ಸ್ ಸ್ಪರ್ಧೆಯ ಕ್ವಾರ್ಟರ್‌ಫೈನಲ್ ತಲುಪಿತು. ಭಾರತ ಭಾನುವಾರ ನಡೆಯುವ ಪಂದ್ಯದಲ್ಲಿ ಜಪಾನ್ ಅಥವಾ ಕಜಕಸ್ತಾನ ತಂಡವನ್ನು ಎದುರಿಸಲಿದೆ.
ಲಂಡನ್‌ನಲ್ಲಿ ವಾಸವಿರುವ ಭಾರತ ಮೂಲದ ಲೇಖಕಿ ಚೇತನಾ ಮಾರೂ ಅವರ ಚೊಚ್ಚಲ ಕಾದಂಬರಿ ‘ವೆಸ್ಟರ್ನ್ ಲೇನ್’ 2023ನೇ ಸಾಲಿನ ಬೂಕರ್ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಆರು ಕೃತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಅತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 276 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭಾರತದ ಪರ ಮೊಹಮ್ಮದ್ ಶಮಿ 51 ರನ್ನಿಗೆ ಐದು ವಿಕೆಟ್ ಕಬಳಿಸಿದರು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು.
ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಜೆಡಿಎಸ್ ಔಪಚಾರಿಕವಾಗಿ ಸೇರ್ಪಡೆಯಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.