ಶಹದೋಲ್(ಮಧ್ಯಪ್ರದೇಶ): ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಯುವತಿಯ ಅಶ್ಲೀಲ ಚಿತ್ರ ತಯಾರಿಸಿ, ಬಳಿಕ ಅದನ್ನು ಬಿಡುಗಡೆ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದಿದೆ.
ಯುವತಿ ಬಾಡಿಗೆಗಿದ್ದ ಮನೆಯ ಮಾಲೀಕನ ಅಪ್ರಾಪ್ತ ಮಗ, ಮತ್ತೊಬ್ಬ ವ್ಯಕ್ತಿ ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ತಿವಾರಿ ತಿಳಿಸಿದ್ದಾರೆ.
ಬಾಲಕನು ಯುವತಿಯ ಫೋಟೊ ಕ್ಲಿಕ್ಕಿಸಿ, ಎಐ ಆಧಾರಿತ ಆ್ಯಪ್ ಬಳಸಿ ಅವುಗಳನ್ನು ತಿರುಚಿ ಅಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿದ್ದಾನೆ. ಬಳಿಕ ಗೆಳೆಯನ ಜೊತೆ ಸೇರಿ ಚಿತ್ರ ಬಿಡುಗಡೆ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿ ನರ್ಸಿಂಗ್ ವಿದ್ಯಾರ್ಥಿಯಾಗಿರುವ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತೆ ದೂರಿನ ಆಧಾರದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಮೊಬೈಲ್ ಫೋನ್ ವಶಪಡಿಸಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.