ಮುಂಬೈ: ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪಕ್ಕದಲ್ಲಿ ಶಿವಸೇನಾ ಅಧ್ಯಕ್ಷ (ಯುಬಿಟಿ) ಉದ್ಧವ್ ಠಾಕ್ರೆ ಅವರು ಕುಳಿತಿದ್ದಕ್ಕೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಶನಿವಾರ ಇದಕ್ಕೆ ಪ‍್ರತಿಕ್ರಿಯಿಸಿರುವ ಉದ್ಧವ್ ಅವರು, ‘ನಾನು ಉದ್ದೇಶಪೂರ್ವಕವಾಗಿಯೇ ಮುಫ್ತಿ ಅವರ ಕೂತಿದ್ದೆ’ ಎಂದು ಹೇಳಿದರು.
ಅಲ್ಲದೇ ಮುಫ್ತಿ ಅವರು ಬಿಜೆಪಿಯ ಉನ್ನತ ನಾಯಕರೊಡನೆ ಕುಳಿತಿರುವ ಫೊಟೊಗಳನ್ನು ಸಹ ಪ್ರದರ್ಶಿಸಿದರು.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು (370ನೇ ವಿಧಿ) ರದ್ದುಗೊಳಿಸಬಾರದು ಎಂಬ ಷರತ್ತಿನ ಮೇಲೆ ಪಿಡಿಪಿ–ಬಿಜೆಪಿ ನಡುವೆ ಮೈತ್ರಿಯೇರ್ಪಟ್ಟಿದ್ದಾಗಿ ಮುಫ್ತಿ ಅವರು ನನಗೆ ಹೇಳಿದರು’ ಎಂದು ತಿಳಿಸಿದರು.
ಶುಕ್ರವಾರದಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ‘ತಮ್ಮ ರಾಜಕೀಯ ಕುಟುಂಬಗಳನ್ನು ಹಾಗೂ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳುವುದಕ್ಕೋಸ್ಕರ ವಿರೋಧ ಪಕ್ಷದವರು ಸಭೆ ಸೇರಿದ್ದಾರೆ’ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಉದ್ಧವ್ ಅವರು, ‘ಬಿಜೆಪಿಯ ಒಬ್ಬ ಹಿರಿಯ ನಾಯಕ ಈ ರೀತಿಯ ಕೀಳುಮಟ್ಟಕ್ಕೆ ಇಳಿಯಬಾರದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.