ಲಖನೌ: 23 ವರ್ಷಗಳಷ್ಟು ಹಳೆಯ ಪ್ರಕರಣಕ್ಕೆ ಸಂಬಂಧಿಸಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ಬಂಧನಕ್ಕೆ ಉತ್ತರ ಪ್ರದೇಶದ ನ್ಯಾಯಾಲಯವೊಂದು ಮಂಗಳವಾರ ಆದೇಶಿಸಿದೆ.
ಆ.28ರಂದು ಸಂಜಯ್ ಸಿಂಗ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸುಲ್ತಾನಪುರದ ಸಂಸದರ/ಶಾಸಕರ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಯಾದವ್, ಪೊಲೀಸರಿಗೆ ನಿರ್ದೆಶನ ನೀಡಿದ್ದಾರೆ.
ಪರವಾನಗಿ ಪಡೆಯದವರಿಗೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಅರೋಪಿಸಿ, 2001ರಲ್ಲಿ ಪ್ರತಿಭಟನೆ ನಡೆಸಿ, ಪ್ರತಿಭಟನಕಾರರು ರಸ್ತೆ ಬಂದ್ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ, ಸಂಜಯ್ ಸಿಂಗ್, ಸಮಾಜವಾದಿ ಪಕ್ಷದ ವಕ್ತಾರ ಅನೂಪ್ ಸಂದಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಸಂಜಯ್ ಸಿಂಗ್, ಅನೂಪ್ ಹಾಗೂ ಇತರರಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ₹1,500 ದಂಡ ವಿಧಿಸಿ, ನ್ಯಾಯಾಧೀಶ ಯಾದವ್ 2023ರ ಜನವರಿಯಲ್ಲಿ ಆದೇಶ ನೀಡಿದ್ದರು.
ಈ ಆದೇಶದ ವಿರುದ್ಧ ಸಂಜಯ್ ಸಿಂಗ್ ಹಾಗೂ ಇತರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೂ, ಅವರಿಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಆಗಸ್ಟ್ 9ರಂದು ನ್ಯಾಯಾಲಯದ ಮುಂದೆ ಶರಣಾಗುವಂತೆ ಎಲ್ಲರಿಗೂ ಸೂಚಿಸಲಾಗಿತ್ತು. ಆದರೆ, ಅವರು ಶರಣಾಗಿರಲಿಲ್ಲ.
ಶರಣಾಗುವುದಕ್ಕೆ ಮತ್ತಷ್ಟು ಸಮಯಾವಕಾಶ ನೀಡುವಂತೆ ಸಿಂಗ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಸಂಸದರ/ಶಾಸಕರ ನ್ಯಾಯಾಲಯ, ಆ.20ರಂದು ಶರಣಾಗುವಂತೆ ಆದೇಶಿಸಿತ್ತು. ಈ ಬಾರಿಯೂ ಶರಣಾಗದ ಕಾರಣ, ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶಿಸಿದೆ.