ಫರೂಖಾಬಾದ್: ಉತ್ತರಪ್ರದೇಶದ ಫತೇಹ್‌ಗಢ ಸಮೀಪದ ಗ್ರಾಮವೊಂದರಲ್ಲಿ ದಲಿತ ಸಮುದಾಯದ ಇಬ್ಬರು ಬಾಲಕಿಯರು ನೇಣು ಹಾಕಿಕೊಂಡೇ ಮೃತಪಟ್ಟಿದ್ದಾರೆ ಎಂಬುದು ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಭಗೌತಿಪುರದ ದಲಿತ ವರ್ಗದ 15, 18 ವರ್ಷ ವಯಸ್ಸಿನ ಬಾಲಕಿಯರು ಆ. 26ರಂದು ಕೃಷ್ಣಜನ್ಮಾಷ್ಟಮಿ ನಿಮಿತ್ತ ಸಮೀಪದ ದೇವಸ್ಥಾನಕ್ಕೆ ಹೋಗಿದ್ದವರು ಹಿಂದಿರುಗಿರಲಿಲ್ಲ. ಬಳಿಕ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದವು.
‘ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ತಂಡವು ‘ಇಬ್ಬರೂ ನೇಣು ಹಾಕಿಕೊಂಡೇ ಮೃತಪಟ್ಟಿದ್ದಾರೆ. ದೇಹದ ಮೇಲೆ ಬಾಹ್ಯ ಸ್ವರೂಪದಲ್ಲಿ ಆದ ಗಾಯದ ಗುರುತುಗಳಿಲ್ಲ’ ಎಂದು ವರದಿ ನೀಡಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಅವ್‌ನಿಂದ್ರಾ ಸಿಂಗ್ ಹೇಳಿದರು.
‘ಅತ್ಯಾಚಾರ ನಡೆದಿರಬಹುದೇ ಎಂದು ತಿಳಿಯಲು, ಅವರ ದೇಹದಿಂದ ಸಂಗ್ರಹಿಸಿದ್ದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿದರು. ವರದಿ ಹಿಂದೆಯೇ ಆತ್ಮಹತ್ಯೆಗೆ ಕಾರಣವೇನು ಎಂಬುದರ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಈ ಮಧ್ಯೆ, ಮೃತ ಯುವತಿಯೊಬ್ಬರ ತಂದೆಯು, ಶವಪರೀಕ್ಷೆಯ ವರದಿ ನಕಲಿಯಾಗಿದ್ದು, ಅದರಲ್ಲಿರುವ ಅಂಶಗಳು ಸತ್ಯಕ್ಕೆ ದೂರವಾದುದಾಗಿವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟುಹಿಡಿದಿದ್ದ ಮೃತರ ಕುಟುಂಬದವರು, ತ್ವರಿತ ತನಿಖೆಯ ಭರವಸೆ ದೊರೆತ ಬಳಿಕ ಅಂತ್ಯಕ್ರಿಯೆ ವಿಧಿಯನ್ನು ನಡೆಸಿದ್ದರು.