ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳ ಸಂಖ್ಯೆ: 3ನೇ ಸ್ಥಾನದಲ್ಲಿ ಕರ್ನಾಟಕ, ಯು.ಪಿಗೆ ಮೊದಲ ಸ್ಥಾನ

ಉನ್ನತ ಶಿಕ್ಷಣ: ಅಖಿಲ ಭಾರತ ಮಟ್ಟದ ಸಮೀಕ್ಷೆ ವರದಿ
Last Updated 30 ಜನವರಿ 2023, 14:36 IST
ಅಕ್ಷರ ಗಾತ್ರ

ನವದೆಹಲಿ: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆಯ (2020-21) ವರದಿ ಪ್ರಕಟವಾಗಿದ್ದು, ಉತ್ತರ ಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ಒಟ್ಟು 8,114 ಕಾಲೇಜುಗಳಿವೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ (4,532), ಮೂರನೇ ಸ್ಥಾನದಲ್ಲಿ ಕರ್ನಾಟಕ (4,233) ಇದೆ.

ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ತಮಿಳುನಾಡು, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್‌, ತೆಲಂಗಾಣ ಇದ್ದು, 10ನೇ ಸ್ಥಾನದಲ್ಲಿ ಕೇರಳ ಇದೆ ಎಂದು ವರದಿ ಹೇಳಿದೆ. ಮೊದಲ ಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಲಕ್ಷ ಜನಸಂಖ್ಯೆಗೆ 32 ಕಾಲೇಜುಗಳಿದ್ದರೆ, ಮಹಾರಾಷ್ಟ್ರದಲ್ಲಿ 34 ಹಾಗೂ ಕರ್ನಾಟಕದಲ್ಲಿ 62 ಕಾಲೇಜುಗಳಿವೆ.

ರಾಜಸ್ಥಾನದಲ್ಲಿ 3,694 ಹಾಗೂ ತಮಿಳುನಾಡಿನಲ್ಲಿ 2,667 ಕಾಲೇಜುಗಳಿವೆ. ಈ ಎರಡೂ ರಾಜ್ಯಗಳಲ್ಲಿ ಲಕ್ಷ ಜನಸಂಖ್ಯೆಗೆ ತಲಾ 40 ಕಾಲೇಜುಗಳಿವೆ. ಶಿಕ್ಷಣ ಸಚಿವಾಲಯ ಈ ವರದಿಯನ್ನು ಬಿಡುಗಡೆ ಮಾಡಿದೆ.

ದೇಶದ ಬಹುತೇಕ ಕಾಲೇಜುಗಳು ಪದವಿ ಕೋರ್ಸ್‌ಗಳನ್ನು ನಡೆಸುತ್ತಿವೆ. ಶೇ 55.2ರಷ್ಟು ಕಾಲೇಜುಗಳು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ನಡೆಸುತ್ತಿದ್ದರೆ, ಪಿಎಚ್.ಡಿ ಕೋರ್ಸ್‌ಗಳನ್ನು ನಡೆಸುತ್ತಿರುವ ಕಾಲೇಜುಗಳ ಪ್ರಮಾಣ ಕೇವಲ ಶೇ 2.9ರಷ್ಟು ಎಂದು ವರದಿ ಉಲ್ಲೇಖಿಸಿದೆ.

ಶೇ 35.8ರಷ್ಟು ಕಾಲೇಜುಗಳು ಕೇವಲ ಒಂದು ಕೋರ್ಸ್‌ ಅನ್ನು ಮಾತ್ರವೇ ನಡೆಸುತ್ತಿದ್ದು, ಈ ಪೈಕಿ ಶೇ 82.2ರಷ್ಟು ಖಾಸಗಿ ಕಾಲೇಜುಗಳಾಗಿವೆ. ಇವುಗಳಲ್ಲಿ ಶೇ 30.9ರಷ್ಟು ಕಾಲೇಜುಗಳು ಬಿ.ಇಡಿ ಕೋರ್ಸ್‌ ಅನ್ನು ಮಾತ್ರವೇ ನಡೆಸುತ್ತಿವೆ.

ಬಹುತೇಕ ಕಾಲೇಜುಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಶೇ 23.6ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆಯಿದೆ. ಶೇ 48.5ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 100ರಿಂದ 500ರ ನಡುವೆ ಇದೆ. ಅಂದರೆ ಶೇ 65.1ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 500ಕ್ಕಿಂತ ಕಡಿಮೆ ಇದೆ ಎಂದು ವರದಿ ತಿಳಿಸಿದೆ.

ಕೇವಲ ಶೇ 4ರಷ್ಟು ಕಾಲೇಜುಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸಮೀಕ್ಷೆಗೆ ಒಳಪಟ್ಟಿರುವ 41,600 ಕಾಲೇಜುಗಳ ಪೈಕಿ 8,903 (ಶೇ 21.4) ಸರ್ಕಾರಿ, 5,658 (ಶೇ 13.3) ಅನುದಾನಿತ ಹಾಗೂ 27.039 (ಶೇ 65) ಖಾಸಗಿ ಕಾಲೇಜುಗಳಾಗಿವೆ.

ಶಿಕ್ಷಣ ಸಚಿವಾಲಯವು 2011ರಿಂದ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಮಟ್ಟದ ಸಮೀಕ್ಷೆ ನಡೆಸುತ್ತಿದೆ.

ಬಿ.ಎ ಪದವಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು

ನವದೆಹಲಿ: ದೇಶದಲ್ಲಿ ಬಿ.ಎ ಪದವಿ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದ್ದರೆ, ನಂತರ ಸ್ಥಾನದಲ್ಲಿ ಬಿ.ಎಸ್ಸಿ ಇದೆ ಎಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ ಮಟ್ಟದ ಸಮೀಕ್ಷೆಯ (2020-21) ವರದಿ ಹೇಳಿದೆ.

ಬಿ.ಎ ಪದವಿ ಓದುತ್ತಿರುವ 1.04 ಕೋಟಿ ವಿದ್ಯಾರ್ಥಿಗಳ ಪೈಕಿ ಶೇ 52.7ರಷ್ಟು ವಿದ್ಯಾರ್ಥಿನಿಯರು. 49.12 ಲಕ್ಷ ವಿದ್ಯಾರ್ಥಿಗಳು ದಾಖಲಾಗಿರುವ ಬಿ.ಎಸ್ಸಿ ಪದವಿಯಲ್ಲಿ ಶೇ 52.2ರಷ್ಟು ವಿದ್ಯಾರ್ಥಿನಿಯರಾಗಿದ್ದಾರೆ. 43.22 ಲಕ್ಷ ವಿದ್ಯಾರ್ಥಿಗಳು ದಾಖಲಾಗಿರುವ ಬಿ.ಕಾಂ ಪದವಿಯಲ್ಲಿ ಶೇ 48.5ರಷ್ಟು ವಿದ್ಯಾರ್ಥಿನಿಯರು ಎಂದು ವರದಿ ತಿಳಿಸಿದೆ.

ದೇಶದಲ್ಲಿ ಬಿ.ಟೆಕ್‌ ಕೋರ್ಸ್‌ಗೆ 23.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ಪೈಕಿ ಶೇ 28.7ರಷ್ಟು ವಿದ್ಯಾರ್ಥಿನಿಯರು. ಬಿ.ಇ ಕೋರ್ಸ್‌ಗೆ ಪ್ರವೇಶ ಪಡೆದ 13.42 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ 28.5ರಷ್ಟು ವಿದ್ಯಾರ್ಥಿನಿಯರಾಗಿದ್ದಾರೆ.

ಸ್ನಾತಕೋತ್ತರ ಹಂತ ಪ್ರವೇಶಿಸುವವರಲ್ಲಿ ಹೆಚ್ಚಿನವರು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ದಾಖಲಾಗಿದ್ದಾರೆ. ಇಲ್ಲಿ ಪ್ರವೇಶ ಪಡೆದಿರುವ 9.41 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 56.5ರಷ್ಟು ವಿದ್ಯಾರ್ಥಿನಿಯರು.

ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಪಿಎಚ್‌.ಡಿ ಕೋರ್ಸ್‌ಗೆ ಪ್ರವೇಶ ಪಡೆದವರ ಸಂಖ್ಯೆ ಹೆಚ್ಚಿದೆ. ಇಲ್ಲಿ ನೋಂದಾಯಿಸಿರುವ 56,625 ವಿದ್ಯಾರ್ಥಿಗಳಲ್ಲಿ ಶೇ 33.3ರಷ್ಟು ವಿದ್ಯಾರ್ಥಿನಿಯರು ಎಂದು ವರದಿ ಉಲ್ಲೇಖಿಸಿದೆ.

ಉನ್ನತ ಶಿಕ್ಷಣ ದಾಖಲಾತಿ: ಐದು ವರ್ಷಗಳಲ್ಲಿ ಶೇ 21ರಷ್ಟು ಏರಿಕೆ

ನವದೆಹಲಿ: ದೇಶದ ಉನ್ನತ ಶಿಕ್ಷಣ ದಾಖಲಾತಿಯು ಕಳೆದ ಐದು ವರ್ಷಗಳಲ್ಲಿ ‌ಶೇ 21ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. 2020–21ನೇ ಸಾಲಿನಲ್ಲಿ ದೇಶದಲ್ಲಿ 4.14 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಿಸಿದ್ದರು. 2019–20ನೇ ಸಾಲಿನಲ್ಲಿ ಇದು 3.85 ಕೋಟಿ ಇತ್ತು.

ಇದು 2019–20ನೇ ಸಾಲಿಗಿಂತ ಶೇ 7.5 ಹಾಗೂ 2014–15ನೇ ಸಾಲಿಗಿಂತ ಶೇ 21ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಐದು ವರ್ಷಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಶೇ 28ರಷ್ಟು ಏರಿಕೆಯಾಗಿದೆ. 2020–21ರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ 2.01 ಕೋಟಿ ಇದ್ದರೆ, 2019–20ರಲ್ಲಿ 1.88 ಕೋಟಿಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT